ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದು, ಇಲ್ಲಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ದೋಸ್ತಿಯನ್ನು ಮುಂದುವರಿಸುವ ತಂತ್ರ ಹೊಂದಿವೆ. ಆದರೆ ಕೆಲ ನಾಯಕರಿಂದ ಭಿನ್ನಮತ ಕೇಳಿ ಬಂದಿದೆ.
ರಾಜ್ಯ ವಿಧಾನಸಭೆ ಬಳಿಕ ಸಮ್ಮಿಶ್ರ ಸರ್ಕಾರದ ಹಾದಿ ಹಿಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿಗಳಾಗಿದ್ದು, ಇದೇ ಹುಮ್ಮಸ್ಸಿನಲ್ಲಿ 2019ರ ಲೋಕಸಭಾ ಚುನಾವಣೆ ಎದುರಿಸುವ ನಿರ್ಧಾರ ಕೂಡಾ ಕೈಗೊಂಡಿವೆ. ಆದರೆ ಈಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಭಿನ್ನಮತ ಪರಿಣಾಮ ಬೀರಲಿದೆ.
ನಗರ ಸ್ಥಳೀಯ ಸಂಸ್ಥೆಗೆ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಕೆಲ ಸದಸ್ಯರು ಜಂಟಿ ಆಗುವ ಬಯಕೆ ಹೊಂದಿದ್ದರೆ, ಮತ್ತೆ ಕೆಲವರು ಅಲ್ಲಲ್ಲಿ ಒಂಟಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಗುರುವಾರ ಸಂಪುಟ ಸಭೆ ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಂಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಚಿವರು ಸೇರಿ ಚರ್ಚೆ ನಡೆಸಿದ್ದರು.
ಚರ್ಚೆಯಲ್ಲಿ ಬಹುತೇಕ ಕಾಂಗ್ರೆಸ್ ನಾಯಕರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಬೇಕಿಲ್ಲ. ಆದರೆ ಜೆಡಿಎಸ್ ನಾಯಕರಿಂದ ಮೈತ್ರಿಗೆ ಆಸಕ್ತಿ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ಸದ್ಯದ ಪರಿಸ್ಥಿತಿ ಹೇಗಿದೆಯಂದರೆ ಬಾಯಿ ಬಿಟ್ಟು ಹೇಳುವಂತಿಲ್ಲ. ಮೌನವಾಗಿ ಇರುವಂತೆಯೂ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆಯೇ ನೇರ ಪೈಪೋಟಿ ಇದೆ. ಈ ಭಾಗದಲ್ಲಿ ಮೈತ್ರಿ ಮಾಡಿಕೊಂಡರೆ ಪಕ್ಷಕ್ಕೆ ನಷ್ಟವಿಲ್ಲ ಎನ್ನುವುದು ಜೆಡಿಎಸ್ ಲೆಕ್ಕಾಚಾರ. ಆದರೆ ತಮ್ಮ ಹಿಡಿತವಿರುವ ಮತಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟರೆ ಪಕ್ಷದ ಅಸ್ಥಿತ್ವದ ಕಥೆ ಏನು ಎನ್ನುವ ಪ್ರಶ್ನೆ ಕಾಂಗ್ರೆಸ್ಸಿಗರಲ್ಲಿ ಕಾಡುತ್ತಿದೆ. ಅಷ್ಟೇ ಅಲ್ಲದೆ ಬೇರೆ ಮತಕ್ಷೇತ್ರದಲ್ಲಿ ದೋಸ್ತಿ ಬೆಳೆಸಿದರೆ ಪಕ್ಷಕ್ಕೆ ಲಾಭವಿಲ್ಲ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಇದರ ಮಧ್ಯೆ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅವರು ಹೈಕಮಾಂಡ್ ಒಪ್ಪಿಸುವ ಕೆಲಸ ಮಾಡುತ್ತಾರೆಯೇ ಎಂಬ ಆತಂಕ ಕೈಪಡೆಗೆ ಎದುರಾಗಿದೆ.