ಕಾರವಾರ: ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಪ್ರತ್ಯೇಕತಾವಾದಿಗಳು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಮೂಲದ ವ್ಯಕ್ತಿ ಸೇರಿ ಮೂವರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ.
ಭಾರತದ ಪಾಟ್ಸನ್ (34), 64 ವರ್ಷದ ಮಲೇಶಿಯಾದ ವ್ಯಕ್ತಿ, 37 ವರ್ಷದ ಮ್ಯಾಸಿಡೋನಿಯಾದ ವ್ಯಕ್ತಿಯನ್ನು ಗುರುವಾರ ಅಪಹರಿಸಿದ ಪ್ರತ್ಯೇಕತಾವಾದಿಗಳು ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದಾರೆ.
ಕೊಲೆಯಾದ ಮೂವರು ಕಾಬೂಲಿನಲ್ಲಿರುವ ಸಾಡೆಕ್ಸೋ ಎಂಬ ವಿಶ್ವದ 2ನೇ ಅತಿದೊಡ್ಡ ಅಂತಾರಾಷ್ಟ್ರೀಯ ಫುಡ್ ಮತ್ತು ಕ್ಯಾಟರಿಂಗ್ ಸರ್ವಿಸ್ ಕಂಪನಿಯಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದರು. ಸಾಡೆಕ್ಸೋ ಕಂಪನಿಯು ಕಚೇರಿ, ಮಿಲಿಟರಿ, ಶಾಲೆ, ಆಸ್ಪತ್ರೆ ಹೀಗೆ ಮಹತ್ವದ ಸ್ಥಳಗಳಿಗೆ ಆಹಾರವನ್ನು ಸರಬರಾಜು ಮಾಡುತ್ತಿದೆ.
ಕಾರವಾರದ ಪಾಡ್ಸನ್ ಅವರು ಕಳೆದ 10 ವರ್ಷಗಳಿಂದ ಸಾಡೆಕ್ಸೋ ಕಂಪನಿಯಲ್ಲಿ ಬಾಣಸಿಗನಾಗಿ ಕಾರ್ಯನಿರ್ವಹಿಸುತಿದ್ದರು. ಗುರುವಾರ ಕೆಲಸದ ನಿಮಿತ್ತ ವಾಹನದಲ್ಲಿ ಸಹೋದ್ಯೋಗಿಗಳ ಜೊತೆ ಹೋಗುತ್ತಿದ್ದಾಗ ಉಗ್ರರು ಅವರನ್ನು ಕಾರಿನ ಸಮೇತ ಅಪಹರಿಸಿದ್ದರು. ಬಳಿಕ ಪಾರ್ಕಿಂಗ್ ಏರಿಯಾಗೆ ಕೆರೆದೊಯ್ದು ಕಾರಿನಲ್ಲಿಯೇ ಮೂವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು.
ಮೃತರ ದೇಹಗಳು ಕಾರಿನೊಳಗೆ ಪತ್ತೆಯಾಗಿವೆ. ಆದರೆ ಕಾರು ಚಾಲಕನನ್ನು ಹಾಗೇ ಬಿಟ್ಟು ಹೋಗಿದ್ದು, ಆತನನ್ನು ಅಪ್ಘಾನ್ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸಿಕ್ಕಿರುವ ಗುರುತಿನ ಚೀಟಿಯಿಂದಾಗಿ ಈ ಮೂವರನ್ನು ಗುರುತಿಸಲಾಗಿದೆ ಎಂದು ಅಫ್ಘಾನ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೆರಡು ದಿನದಲ್ಲಿ ಮೃತರ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.