ಬೆಂಗಳೂರು, ಆ.3-ರಾಜ್ಯದಲ್ಲಿ ದೋಸ್ತಿ ಸರ್ಕಾರ ಆಡಳಿತ ನಡೆಸುತ್ತಿದ್ದರೂ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಖಾಡಕ್ಕಿಳಿದು ಪರಸ್ಪರ ಸೆಣಸಾಡಲಿವೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಕಾಂಗ್ರೆಸ್‍ನಲ್ಲಿ ವಿರೋಧ ವ್ಯಕ್ತವಾಗಿದೆ. ಬಹುತೇಕ ಜೆಡಿಎಸ್ ವಲಯದಲ್ಲೂ ಇದೇ ಅಭಿಪ್ರಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಕಣಕ್ಕಿಳಿದು ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ಎರಡೂ ಪಕ್ಷಗಳು ಮುಂದಾಗಿವೆ.
ಮೈತ್ರಿ ವಿಷಯವನ್ನು ಸ್ಥಳೀಯ ಪರಿಸ್ಥಿತಿಗನುಗುಣವಾಗಿ ಸ್ಥಳೀಯ ಮುಖಂಡರೇ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬಹುದಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆಗಳು ಪಕ್ಷದ ಮೂಲ ಅಸ್ತಿತ್ವವನ್ನು ಸಾರುವಂತಹ ಚುನಾವಣೆಗಳಾಗಿದ್ದು, ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೂ ಇದೇ ಮೈಲಿಗಲ್ಲು. ಹಾಗಾಗಿ ಪಕ್ಷ ಬಲಯುತವಾಗಿರಲು ಸ್ಥಳೀಯ ಸಂಸ್ಥೆ ಚುನಾವಣೆಗಳು ಹೆಚ್ಚು ಪ್ರಮುಖವೆನಿಸುತ್ತವೆ. ಈ ನಿಟ್ಟಿನಲ್ಲಿ ಇದೇ 29 ರಂದು ನಿಗದಿಯಾಗಿರುವ ನಗರ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದಿರಲು ತೀರ್ಮಾನಿಸಿದೆ.
ಒಂದು ವೇಳೆ ಹೊಂದಾಣಿಕೆಯೊಂದಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸ್ಪರ್ಧಿಸಿದರೆ ಆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಪಕ್ಷಗಳು ಸಮ್ಮಿಶ್ರ ಸರ್ಕಾರದ ಅಧಿಕಾರಾವಧಿ ನಂತರ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿ ಕುಗ್ಗುವ ಸಾಧ್ಯತೆ ಇದೆ. ಪಕ್ಷದ ಬೆಳವಣಿಗೆಗೆ ಆರಂಭಿಕ ಹಂತವಾಗಬೇಕಾದ ಸ್ಥಳೀಯ ಸಂಸ್ಥೆ ಚುನಾವಣೆ ರಾಜಕೀಯ ಪಕ್ಷಗಳಿಗೆ ಸಾಕಷ್ಟು ಮಹತ್ವದ್ದಾಗಿರುವ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಳ್ಳದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಕಾಂಗ್ರೆಸ್‍ನ ಸ್ಥಳೀಯ ನಾಯಕರು ಸೇರಿದಂತೆ ಎಲ್ಲರೂ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಔತಣಕೂಟದ ಸಂದರ್ಭದಲ್ಲೂ ಸಹ ಕಾಂಗ್ರೆಸ್‍ನ ಬಹುತೇಕ ಸಚಿವರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದರು.
ವಿಧಾನಸಭೆ ಆಡಳಿತಕ್ಕೆ ಸೀಮಿತವಾಗಿರುವ ಮೈತ್ರಿ ಲೋಕಸಭೆ ಚುನಾವಣೆಯಲ್ಲಿ ಮುಂದುವರೆಯಲಿದೆ. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಈ ಮೈತ್ರಿಯನ್ನು ಮುಂದುವರೆಸದಿರಲು ಎಲ್ಲಾ ನಾಯಕರು ಒತ್ತಡ ತಂದ ಹಿನ್ನೆಲೆಯಲ್ಲಿ ಕೆಪಿಸಿಸಿ ಈ ನಿರ್ಧಾರ ಕೈಗೊಂಡಿದೆ.