ಹೊಸದಿಲ್ಲಿ: ಪಾಕಿಸ್ತಾನದ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಮತ್ತು ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ಭಾರತದಲ್ಲಿ ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ತಾನ ಸೇನೆ ಸಹಾಯದಿಂದ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಆಗಸ್ಟ್ 11 ರಂದು ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್ ಖಾನ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಆಗಸ್ಟ್ 15 ರಂದು ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದೆ. ಈ ಎರಡೂ ಕಾರ್ಯಕ್ರಮಗಳ ನಡುವೆ ಭಾರತದಲ್ಲಿ ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ತಾನ ಮೂಲದ ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಗೃಹ ಸಚಿವಾಲಯಕ್ಕೆ ಎಚ್ಚರಿಕೆ ನೀಡಿದೆ.
ಉಗ್ರರ ಬಾರ್ಡರ್ ಆ್ಯಕ್ಷನ್ ಟೀಂ (ಬ್ಯಾಟ್) ತಂಡದ ಸೋಗಿನಲ್ಲಿ ಪಾಕಿಸ್ತಾನಿ ಸೈನಿಕರೇ ಭಾರತೀಯ ಯೋಧರ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.
ಗಡಿಯಲ್ಲಿ ಈಗಾಗಲೇ ಸುಮಾರು 600ಕ್ಕೂ ಅಧಿಕ ಉಗ್ರರು ಮತ್ತು ಉಗ್ರರ ಸೋಗಿನಲ್ಲಿರುವ ಪಾಕಿಸ್ತಾನಿ ಸೈನಿಕರು ಗಡಿನಿಯಂತ್ರಣ ರೇಖೆ ದಾಟಲು ಕಾದು ಕುಳಿತಿದ್ದು, ಅವಕಾಶ ಸಿಕ್ಕ ತಕ್ಷಣವೇ ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಭಾರತದ ಗಡಿ ಪ್ರದೇಶಗಳಾದ ಗುರೆಝ್ ಸೆಕ್ಟರ್ 67 ಮಂದಿ ಭಯೋತ್ಪಾದಕರು ಹಾಗೆಯೇ ಮಶಿಲ್ ಸೆಕ್ಟರ್ ನಲ್ಲಿ 96, ಕೆರನ್ ಸಕ್ಟರ್ ನಲ್ಲಿ 117, ಟ್ಯಾಂಗ್ಧರ್ ಸೆಕ್ಟರ್ ನಲ್ಲಿ 79, ಉರಿ ಸೆಕ್ಟರ್ 26, ರಾಂಪುರ ಸೆಕ್ಟರ್ 43, ಪೂಂಚ್ ಸೆಕ್ಟರ್ 43, ಕೃಷ್ಣಾ ಘಾಟಿ ಸೆಕ್ಟರ್ 21, ಬೀಂಬರ್ ಗ್ಯಾಲಿ ಸೆಕ್ಟರ್ 40, ನೌಶೇರಾ ಸೆಕ್ಟರ್ 6 ಹಾಗೂ ಸುಂದರ್ಬನಿ ಸೆಕ್ಟರ್ ನಲ್ಲಿ 16 ಮಂದಿ ಭಯೋತ್ಪಾದಕರು ಸೇರಿದಂತೆ ಒಟ್ಟು 600 ಮಂದಿ ಉಗ್ರರು ಒಳನುಸುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ.
ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಸೇನೆಗೆ ಗಡಿಯಲ್ಲಿ ವ್ಯಾಪಕವಾಗಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ.