
ವಾಷಿಂಗ್ಟನ್: ಭಾರತ ಪ್ರಜಾಪ್ರಭುತ್ವ ಹಾಗೂ ಸಾರ್ವಭೌಮ ರಾಷ್ಟ್ರ ಎಂದು ಸಂವಿಧಾನದಲ್ಲಿ ಘೋಷಿಸಿಕೊಂಡಿದೆ. ಆದರೆ ಭಾರತದ ಸಾರ್ವಭೌಮತೆಗೆ ವಿಶ್ವದ ಬಲಿಷ್ಠ ರಾಷ್ಟ್ರವೊಂದರಿಂದ ಧಕ್ಕೆಯಾಗಲಿದೆ ಎಂಬ ಮಾಹಿತಿಯೊಂದು ಹರಿದಾಡುತ್ತಿದೆ.
ಅಮೆರಿಕಾದ ಆಕ್ಸ್ಫರ್ಡ್ ಯೂನಿವರ್ಸಿಟಿ ಇಂತಹದೊಂದು ಆಘಾತಕಾರಿ ಮಾಹಿತಿ ಹೊರಹಾಕಿದೆ. ಅಂದಹಾಗೆ ಇದರ ಮಾಹಿತಿಯಂತೆ ಪ್ರಬಲ ರಾಷ್ಟ್ರ ರಷ್ಯಾ, ಭಾರತ ಹಾಗೂ ಬ್ರೆಜಿಲ್ನಂತಹ ರಾಷ್ಟ್ರಗಳಲ್ಲಿನ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಲು ಇಲ್ಲಿನ ಮಾಧ್ಯಮಗಳನ್ನು ಟಾರ್ಗೆಟ್ ಮಾಡಲಿದೆ ಎಂಬ ಆರೋಪ ಕೇಳಿ ಬಂದಿದೆ. ಆಕ್ಸ್ಫರ್ಡ್ ಇಂಟರ್ನೆಟ್ ಇನ್ಸ್ಟಿಟ್ಯೂಷನ್ ಅಂಡ್ ಬಲ್ಲಿಯೊಲ್ ಕಾಲೇಜ್ನ ಇಂಟರ್ನೆಟ್ ಸ್ಟಡೀಸ್ನ ಪ್ರೊಫೆಸರ್ ಫಿಲ್ ಎನ್. ಹೋವಾರ್ಡ್ ಈ ಬಗ್ಗೆ ಅಮೆರಿಕದ ಸೆನೆಟ್ಗೆ ಮಾಹಿತಿ ನೀಡಿದ್ದಾರೆ.
2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪದ ಆರೋಪವನ್ನು ಕೇಂದ್ರೀಕರಿಸಿ ಸೆನೆಟ್ನ ಇಂಟಲಿಜೆನ್ಸ್ ಕಮಿಟಿಯು ಸಾಮಾಜಿಕ ಜಾಲತಾಣಗಳ ಮೇಲೆ ವಿದೇಶಿ ಪ್ರಭಾವದ ಕುರಿತಾಗಿ ಮಾಹಿತಿ ಕಲೆಹಾಕಿದೆ. ಈ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಅಮೆರಿಕದಂತೆ ಮಾಧ್ಯಮಗಳು ವೃತ್ತಿಪರವಾಗಿಲ್ಲದ ದೇಶಗಳಲ್ಲಿ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದೂ ಅವರು ಎಚ್ಚರಿಸಿದ್ದಾರೆ. ಇಲ್ಲಿನ ಮಾಧ್ಯಮಗಳು ಹೆಚ್ಚು ಕಲಿಯಬೇಕು ಹಾಗೂ ಅಭಿವೃದ್ಧಿ ಸಾಧಿಸಬೇಕು ಎಂದು ಸಲಹೆ ನೀಡಿದ್ದಾರೆ. ಹಂಗೇರಿಯನ್ ಮಾಧ್ಯಮಗಳಲ್ಲಿ ಹೀಗೇ ರಷ್ಯಾ ಹಸ್ತಕ್ಷೇಪ ಮಾಡಿದ ಉದಾಹರಣೆಯನ್ನೂ ಅವರು ಸೆನೆಟ್ ಮುಂದಿಟ್ಟಿದ್ದಾರೆ.