ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಅಚಲ: ಹೋರಾಟ ಸಮಿತಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟು ಕೆಲ ಸಂಘಟನೆಗಳು ಆರಂಭದಲ್ಲಿ ಕರೆ ನೀಡಿದ್ದ ಬಂದ್ ನ್ನು ಹಿಂಪಡೆದಿದ್ದರಿಂದ ಜಿಲ್ಲೆಗಳಲ್ಲಿ ಎಂದಿನಂತೆ ದಿನಚರಿ ಆರಂಭವಾಗಿದೆ. ಇಂದು ಕರೆಕೊಟ್ಟಿರುವ ಉತ್ತರ ಕರ್ನಾಟಕ ಬಂದ್​ ನ್ನು ಹಿಂಪಡೆದಿದ್ದು ಸಾಂಕೇತಿಕ ಧರಣಿಯನ್ನು ಮಾತ್ರ ಕೆಲ ಸಂಘಟನೆಗಳು ನಡೆಸುತ್ತಿವೆ.

ಹುಬ್ಬಳ್ಳಿಯಲ್ಲಿ ಎಂದಿನಂತೆ ಸಾರಿಗೆ- ಸಂಚಾರ ಆರಂಭವಾಗಿದ್ದು ಜನಜೀವನ ಎಂದಿನಂತೆ ಸಾಗಿದೆ. ಅಂಗಡಿ-ಮುಂಗಟ್ಟುಗಳನ್ನು ತೆರೆದು ವ್ಯಾಪಾರಸ್ಥರು ವಹಿವಾಟು ಆರಂಭಿಸಿದ್ದಾರೆ. ಆದರೆ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಆರಂಭವಾಗಿದೆ. ವಿರುಪಾಕ್ಷಪ್ಪ ಕಳ್ಳಿಮನಿ, ನಾಗೇಶ ಗೋಲಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬೆಳಗಾವಿಯಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಜನರಿಗೆ ಹೂವುಗಳನ್ನು ನೀಡಿ ಬಂದ್ ಮಾಡಬೇಡಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡ, ಅಖಂಡ ಕರ್ನಾಟಕ ಪರಿಕಲ್ಪನೆಯಡಿ ನಾವೆಲ್ಲರೂ ಜೀವನ ನಡೆಸೋಣ ಎಂದು ಕಾರ್ಯಕರ್ತರು ಜನರಿಗೆ ಮನವಿ ಮಾಡುತ್ತಿದ್ದಾರೆ.

ಗಡಿ ಜಿಲ್ಲೆ ಬೀದರ್​ಕೂಡ ಎಂದಿನಂತೆ ಜನಜೀವನ ಮುಂದುವರಿದಿದೆ. ಬೆಳಗ್ಗೆಯಿಂದ ಎಂದಿನಂತೆ  ಆಟೋ ಹಾಗೂ ಬಸ್ ಸಂಚಾರವಿದೆ. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಚಿಕ್ಕೋಡಿಯಲ್ಲಿ ಯಾವುದೆ ಬಂದ್ ಇಲ್ಲ, ಎಂದಿನಂತೆ ಸಾರಿಗೆ ಸಂಚಾರ ಆರಂಭವಾಗಿದೆ, ಜನಜೀವನ ಮುಂದುವರಿದಿದೆ.

ಇನ್ನೊಂದೆಡೆ ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ಉತ್ತರ ಕರ್ನಾಟಕ ಹೋರಾಟ ಅಚಲ, ಇಂದು ಮೊದಲ ಹೆಜ್ಜೆ ಇಟ್ಟಿದ್ದೇವೆ, ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್  ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ