ರಾಜ್ಯ ಒಡೆಯುವವರಿಗೆ ಕನ್ನಡಿಗರ ಪಾಠ- ಇಂದು ಉತ್ತರ ಕರ್ನಾಟಕ ಬಂದ್ ಇಲ್ಲ

ಬೆಂಗಳೂರು: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಆಗ್ರಹಿಸಿ ಕರೆ ನೀಡಲಾಗಿದ್ದ ಬಂದ್ ವಾಪಸ್ ಪಡೆಯಲಾಗಿದೆ. ಈ ಮೂಲಕ ಉತ್ತರ ಕರ್ನಾಟಕದ ಜನರು ತಮ್ಮ ಹೋರಾಟ ಏನಿದ್ದರೂ ಅಭಿವೃದ್ದಿಗಷ್ಟೇ ಹೊರತು ಪ್ರತ್ಯೇಕ ರಾಜ್ಯಕ್ಕಲ್ಲ ಅನ್ನೋದನ್ನ ಸಾರಿದ್ದಾರೆ.

ಬಂದ್ ಬದಲು 13 ಜಿಲ್ಲೆಗಳಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲು ಸಂಘಟನೆಗಳು ನಿರ್ಧರಿಸಿವೆ. ಇನ್ನು ಮಹದಾಯಿ ಹೋರಾಟಗಾರರು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಬಂದ್‍ಗೆ ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳು ಮುಖಂಡರೂ ಸಹ ಈ ಹೋರಾಟದಿಂದ ದೂರ ಸರಿದಿದ್ದಾರೆ.

ಹುಬ್ಬಳ್ಳಿಯಲ್ಲಿ ಯಾವುದೇ ಕನ್ನಡಪರ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ದೊರೆಯುತ್ತಿಲ್ಲ. ಕೇವಲ ಉತ್ತರ ಕರ್ನಾಟಕ ರೈತ ಸಂಘದಿಂದ ಮಾತ್ರ ಬಂದ್‍ಗೆ ಬೆಂಬಲ ದೊರೆಯುತ್ತಿದೆ. ಹೀಗಾಗಿ ವಾಣಿಜ್ಯ ನಗರಿಯಲ್ಲಿ ಕಾಣಿಸಿಗದ ಬಂದ್ ಛಾಯೆ ಕೇವಲ ಸಾಂಕೇತಿಕ ಪ್ರತಿಭಟನೆ ನಡೆಯೋ ಸಾಧ್ಯತೆಗಳಿದ್ದು, ಬೆಳಗ್ಗೆ 11 ಗಂಟೆ ವೇಳೆ ರೈತ ಸಂಘದಿಂದ ಸಾಂಕೇತಿಕ ಪ್ರತಿಭಟನೆ ನಡೆಯುವ ಸಾಧ್ಯತೆಗಳಿವೆ.

ಕಲಬುರಗಿಯಲ್ಲಿಯೂ ಸಾರಿಗೆ ಸಂಚಾರ, ಜನಜೀವನ, ಅಂಗಡಿ ಮುಂಗಟ್ಟುಗಳನ್ನ ವ್ಯಾಪಾರಸ್ಥರು ತೆರೆದಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಣೆಯಲ್ಲಿವೆ. ಆದರೆ ಬಂದ್ ವಿರೋಧಿಸಿ ಕೆಲ ಸಂಘಟನೆಗಳಿಂದ ಪ್ರತಿಭಟನೆ ಸಾಧ್ಯತೆಗಳಿವೆ.

ರಾಯಚೂರಿನಲ್ಲಿ ಬಂದ್ ಆಚರಣೆಯಿಲ್ಲ. ಯಾವುದೇ ಸಂಘಟನೆ ಬಂದ್ ಕರೆ ನೀಡಿಲ್ಲ. ಮುಂಜಾನೆಯಿಂದ ಜನಜೀವನ ಎಂದಿನಂತೆ ಸಹಜ ಸ್ಥಿತಿಯಲ್ಲಿದೆ. ಉಸ್ಮಾನೀಯ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಆರಂಭವಾಗಿದ್ದು, ಬಸ್ ಸಂಚಾರ ಯಥಾಸ್ಥಿತಿಯಲ್ಲಿದೆ. 11 ಗಂಟೆಗೆ ಹೈಕ ಹೋರಾಟ ಸಮಿತಿಯಿಂದ ಧರಣಿ ಸಾಧ್ಯತೆಗಳಿದ್ದು, ಹೈಕ ಭಾಗದ ಒಂದು ಜಿಲ್ಲೆಯನ್ನು ಎರಡನೆಯ ರಾಜಧಾನಿ ಮಾಡಲು ಆಗ್ರಹಿಸಿದ್ದಾರೆ. 371 ಜೆ ವಿಧಿ ಸಮರ್ಪಕ ಜಾರಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಪ್ರತ್ಯೇಕ ರಾಜ್ಯ ಬೇಡ ಅಂತ ಬಂದ್ ವಿರೋಧಿಸಿ ಧರಣಿ ಸಾಧ್ಯತೆಗಳಿವೆ.

ಹಾವೇರಿಯಲ್ಲಿ ಯಾವುದೇ ಬಂದ್ ಕರೆಯಿಲ್ಲದೆ ಎಂದಿನಂತಿರೋ ಬಸ್ ಸಂಚಾರ, ಜನಜೀವನ ನಡೆಯುತ್ತಿದೆ. ಹಾಗೂ ಶಾಲಾ ಕಾಲೇಜುಗಳಿಗೂ ರಜೆ ಇಲ್ಲ. ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಬಂದ್ ವಾಪಸ್ ಪಡೆದಿದ್ದು, ಇನ್ನು ಕನ್ನಡಪರ ಸಂಘಟನೆಗಳಿಂದಲೂ ಬಂದ್ ಗೆ ಬೆಂಬಲವಿಲ್ಲ. ಬಂದ್ ಬೆಂಬಲಿಸಿ ಬೆಳಗ್ಗೆ 11 ಗಂಟೆಗೆ ಉತ್ತರ ಕರ್ನಾಟಕ ರೈತ ಸಂಘದಿಂದ ಪ್ರತಿಭಟನೆ ಕೈಗೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಬಂದ್ ಗೆ ನೀರಸ ಪ್ರತಿಕ್ರಿಯೆ ಉಂಟಾಗಿದ್ದು, ಬಂದ್ ಕರೆ ವಿರೋಧಿಸಿ ಕರವೇ ಸಂಘಟನೆಯಿಂದ ಪ್ರತಿಭಟನೆ ಸಾಧ್ಯತೆಗಳಿವೆ. ರಾಜ್ಯ ವಿಂಗಡಣೆ ಬೇಡ, ಉತ್ತರ ಕರ್ನಾಟಕ ಅಭಿವೃದ್ದಿಗೆ ಒತ್ತಾಯಿಸಿ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆ.11ಕ್ಕೆ ಧರಣಿ ಆರಂಭವಾಗಲಿದೆ. ಇಲ್ಲೂ ಕೂಡ ಬೆಳಗ್ಗೆಯಿಂದ ಎಂದಿನಂತಿರುವ ಜನಜೀವನ, ಸರ್ಕಾರಿ ಬಸ್, ಶಾಲಾ ಕಾಲೇಜು, ಆಟೋ, ಹೋಟೆಲ್ ಎಂದಿನಂತೆ ತೆರೆಯಲಾಗಿದೆ.

ಕೊಪ್ಪಳದಲ್ಲಿ ಬಂದ್ ಗೆ ಯಾವುದೇ ಸಂಘಟನೆ ಕರೆ ಕರೆನೀಡದೆ ಎಂದಿನಂತೆ ಜನಜೀವನ, ಬಸ್ ಸಂಚಾರ, ಅಂಗಡಿ ಮುಂಗಟ್ಟು ಆರಂಭವಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. 11 ಗಂಟೆಗೆ ಉತ್ತರ ಕರ್ನಾಟಕ ಅಭಿವೃದ್ದಿಗೆ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಿವೆ. ಧಾರವಾಡದಲ್ಲಿ ಸಹಜ ಸ್ಥಿತಿಯಲ್ಲಿದ್ದು, ಎಂದಿನಂತೆ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿ ಆರಂಭವಾಗಿವೆ.

ಚಿಕ್ಕೋಡಿಯಲ್ಲಿ ಬಂದ್ ಗೆ ಯಾವುದೇ ಸಂಘಟನೆಗಳ ಬೆಂಬಲವಿಲ್ಲ. ಸಂಚಾರ ವ್ಯವಸ್ಥೆ ಹಾಗೂ ಅಂಗಡಿ ಮುಗ್ಗಟ್ಟುಗಳು ಹಾಗೂ ಶಾಲಾ ಕಾಲೇಜು ಹಾಗೂ ಆಸ್ಪತ್ರೆಗಳು ಎಂದಿನಂತೆ ಆರಂಭವಾಗಿವೆ. ಆದರೆ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ 11 ಗಂಟೆಗೆ ಸಾಂಕೇತಿಕ ಪ್ರತಿಭಟನೆ ಸಾಧ್ಯತೆಗಳಿವೆ.

ಕುಂದಾನಗರಿ ಬೆಳಗಾವಿಯಲ್ಲಿ ಬಂದ್ ಗೆ ಬೆಂಬಲವಿಲ್ಲ. ಬಂದ್ ಗೆ ವಿರೋಧಿಸಿ ಎಂಟು ಗಂಟೆಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಕರವೇ ನಾರಾಯಣಗೌಡರ ಬಣದಿಂದ ಹಾಗೂ ಶಿವರಾಮೇಗೌಡ ಬಣದ ಕಾರ್ಯಕರ್ತರಿಂದ ಗುಲಾಬಿ ನೀಡಿ ಬಂದ್ ಗೆ ಬೆಂಬಲಿಸದಂತೆ ಕರೆ ನೀಡಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಉ.ಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳಿಂದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಜಿಲ್ಲೆಯ ಯಾವುದೇ ಮಠಾಧೀಶರು ಹಾಗೂ ರೈತ ಸಂಘಟನೆಗಳಿಂದ ಬಂದ್ ಗೆ ಬೆಂಬಲ ಸಿಕ್ಕಿಲ್ಲ. ಹಾಗಾಗಿ ಎಂದಿನಂತೆ ಶಾಲಾ ಕಾಲೇಜುಗಳು, ಬಸ್ ಸಂಚಾರ, ಅಂಗಡಿ ಮುಗ್ಗಟ್ಟುಗಳು ಕಾರ್ಯನಿರ್ವಹಣೆಯಲ್ಲಿವೆ. ಆದರೆ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದಿಂದ ಬಂದ್ ಗೆ ಕರೆ ಹಿನ್ನೆಲೆ ಬೆಳಗ್ಗೆ ಎಂಟು ಗಂಟೆಗೆ ಬಸ್ ನಿಲ್ದಾಣಕ್ಕೆ ಆಗಮಿಸಲಿರುವ ಉ.ಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಬಂದ್ ಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಒತ್ತಾಯಪೂರ್ವಕವಾಗಿ ಬಂದ್ ಮಾಡದಂತೆ ಪೊಲೀಸ್ ಅಧಿಕಾರಿಗಳಿಂದ ಪ್ರತಿಭಟನಾಕಾರರಿಗೆ ಎಚ್ಚರಿಕೆ ಮುಂಜಾಗ್ರತಾ ಕ್ರಮವಾಗಿ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸರ ನಿಯೋಜನೆ ಮಾಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ