
ಬೆಂಗಳೂರು, ಆ.2- ಬೆಂಗಳೂರಿನ ಆಸ್ತಿ ತೆರಿಗೆ ಸೋರಿಕೆ ತಡೆಯಲು ಡ್ರೋಣ್ ಸಹಕಾರಿಯಾಗಲಿದೆ ಎಂದು ಭಾರೀ ಮತ್ತು ಮಧ್ಯಮ ಕೈಕಾರಿಕಾ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಜಿಕೆವಿಕೆಯಲ್ಲಿ ಮಾನವರಹಿತ ವೈಮಾನಿಕ ವ್ಯವಸ್ಥೆಯ ಪ್ರಾಯೋಗಿಕ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡ್ರೋಣ್ ಕ್ಯಾಮೆರಾವನ್ನು ಬಳಸಿಕೊಂಡಲ್ಲಿ ಬೆಂಗಳೂರಿನ ಎಲ್ಲಾ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರಬಹುದಾಗಿದೆ. ಇದರಿಂದ ಕೋಟ್ಯಂತರ ರೂ. ಆಸ್ತಿ ತೆರಿಗೆ ಸಂಗ್ರಹವಾಗಲಿದೆ. ಇದೇ ರೀತಿ ಹಲವು ಕಡೆ ಪ್ರಾಯೋಗಿಕ ಪರೀಕ್ಷೆಗಳು ನಡೆದಿದ್ದು, ಫಲಿತಾಂಶ ಉತ್ತಮವಾಗಿ ಬಂದಿದೆ. ಹೀಗಾಗಿ ಡ್ರೋಣ್‍ನನ್ನು ಎಲ್ಲೆಡೆ ಬಳಸಿಕೊಳ್ಳಲು ನೆರವಾಗಲಿದೆ. ಇದರಿಂದ ಅರಣ್ಯ, ಪ್ರಕೃತಿ ವಿಕೋಪ, ಕೃಷಿ ಸಂಬಂಧಿಸಿದ ಇಲಾಖೆಗಳಲ್ಲೂ ಅಳವಡಿಸಿಕೊಳ್ಳಬಹುದಾಗಿದೆ ಎಂದರು.
ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಬೆಳೆ ವಿಮೆ ಹಾಗೂ ಭೂಮಿಗೆ ಸಂಬಂಧಿಸಿದಂತೆ ಸರ್ವೆ ನಡೆಸಲು ಡ್ರೋಣ್ ಬಳಸಲು ಚಿಂತನೆ ನಡೆಸಲಾಗಿದೆ. ಬೆಳೆ ಹಾನಿಗೀಡಾದಾಗ, ಬೆಳೆ ನಷ್ಟವಾದಾಗ ನಿಖರ ಮಾಹಿತಿ ಪಡೆಯಲು ಡ್ರೋಣ್ ತಂತ್ರಜ್ಞಾನ ಉಪಯೋಗಕ್ಕೆ ಬರಲಿದೆ. ಈಗ ಪ್ರಾಯೋಗಿಕವಾಗಿ ಡ್ರೋಣ್ ಬಳಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬಹುದಾಗಿದೆ. ಈ ಸಂಬಂಧ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.