ಸರ್ಕಾರಿ ಅಧಿಕಾರಿಗಳು ಪದೇ ಪದೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಚ್.ಎಲ್.ದತ್ತು

ಬೆಂಗಳೂರು, ಆ.2- ಸರ್ಕಾರಿ ಅಧಿಕಾರಿಗಳು ದುರ್ಬಲವರ್ಗದವರ ಸಾಮಾಜಿಕ ಮತ್ತು ಆರ್ಥಿಕ ಏಳ್ಗೆಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಪದೇ ಪದೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‍ನ ನಿವೃತ್ತ ಮುಖ್ಯನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಚ್.ಎಲ್.ದತ್ತು ಹೇಳಿದರು.

ವಿಕಾಸಸೌಧದಲ್ಲಿಂದು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಬಹಿರಂಗ ಚರ್ಚೆ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ದುರ್ಬಲ ವರ್ಗದವರಿಗೆ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಕಾಳಜಿ ವಹಿಸಬೇಕು. ಅವಕಾಶ ವಂಚಿತರ ಬಗ್ಗೆ ಕನಿಕರ ಮತ್ತು ಕಾಳಜಿ ಇರಬೇಕು. ನಿರುದ್ಯೋಗಿಗಳಿಗೆ ಮಹಾತ್ಮಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆಯಡಿ ಕೆಲಸ ಕೊಡಿಸಬೇಕು. ಆಹಾರ ಭದ್ರತಾ ಕಾಯ್ದೆಯಡಿ ನೆರವು ನೀಡಿ ಹಸಿವು ಮುಕ್ತಗೊಳಿಸಬೇಕು. ಕುಡಿಯುವ ನೀರು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಹಸಿವಿನಿಂದ ಸಾಯುವವರಿಗಿಂತಲೂ ಕಾಯಿಲೆಗೆ ಔಷಧಿ ತೆಗೆದುಕೊಳ್ಳಲಾಗದೆ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ನೆರವಾಗಬೇಕು. ಜೈಲುಗಳ ಪರಿಸ್ಥಿತಿ ಸುಧಾರಿಸಬೇಕು. ಮಹಿಳೆಯರ ಹಕ್ಕುಗಳಿಗೆ ಇಡೀ ಸಮಾಜ ಒಂದಾಗಿ ನಿಲ್ಲಬೇಕು. ವಸತಿ ರಹಿತರಿಗೆ ಭೂಮಿ ಒದಗಿಸಿಕೊಡಬೇಕು ಎಂದು ಸೂಚನೆ ನೀಡಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಬಹಿರಂಗ ವಿಚಾರಣೆ ಮೂಲಕ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಿದೆ. ಇದರಿಂದ ದೆಹಲಿವರೆಗೂ ಬರಲು ಸಾಧ್ಯವಾಗದೇ ಇರುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ಸುಮಾರು 250 ವಿವಿಧ ಪ್ರಕರಣಗಳನ್ನು ಬಹಿರಂಗ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ನೇರವಾಗಿ ಕನ್ನಡದಲ್ಲೇ ವಿಚಾರಣೆ ನಡೆಯುತ್ತಿರುವುದರಿಂದ ಅನಕ್ಷರಸ್ಥರು ಕೂಡ ತಮ್ಮ ಸಮಸ್ಯೆಗಳನ್ನು ಸುಲಭವಾಗಿ ಆಯೋಗದ ಗಮನಕ್ಕೆ ತರಲು ಸಾಧ್ಯವಾಗುತ್ತದೆ.

ಕೊಳ್ಳೆಗಾಲದ ವ್ಯಕ್ತಿಯೊಬ್ಬರು ರಾಷ್ಟ್ರೀಯ ಹೆದ್ದಾರಿಗಾಗಿ ತಮ್ಮ ಮನೆಯನ್ನು ಒಡೆದುಹಾಕಲಾಗಿದೆ ಎಂದು ಆಯೋಗಕ್ಕೆ ದೂರಿದ್ದರು. ಈ ಬಗ್ಗೆ ದತ್ತು ಅವರು ಅಧಿಕಾರಿಗಳನ್ನು ಪ್ರಶ್ನಿಸಿದಾಗ. ಅನಧಿಕೃತವಾಗಿ ಅವರು ಮನೆ ನಿರ್ಮಿಸಿಕೊಂಡಿದ್ದರು ಎಂಬ ಉತ್ತರ ಬಂತು. ಇದರಿಂದ ಕೆಂಡಾಮಂಡಲರಾದ ದತ್ತು ಅವರು, ಸುಮಾರು 20 ವರ್ಷಗಳಿಂದ ಅದೇ ಜಾಗದಲ್ಲಿ ವಾಸವಿದ್ದಾರೆ. ಈ ಮೊದಲೆಲ್ಲಾ ನಿಮಗೆ ಅದು ಕಾನೂನು ಬಾಹಿರ ಎಂದು ಅನ್ನಿಸಲಿಲ್ಲವೆ. ನೀವು ತಪ್ಪು ಮಾಡಿದಾಗ ಮಾತ್ರ ಕಾನೂನು ಬಾಹಿರವಾಗಿರುವುದು ನೆನಪಾಯ್ತೆ ಎಂದು ತರಾಟೆಗೆ ತೆಗೆದುಕೊಂಡರು.

ಇದರಲ್ಲಿ ಯಾರದು ತಪ್ಪು, ಸರಿ ಎಂದು ನಾನು ಕೇಳುವುದಿಲ್ಲ. ಇನ್ನೆರಡು ತಿಂಗಳ ಒಳಗಾಗಿ ಸಂತ್ರಸ್ತ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಬೇಕು. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಪ್ರಕರಣವನ್ನು ನಾನು ಗಮನದಲ್ಲಿಟ್ಟಿಕೊಂಡಿರುತ್ತೇನೆ. ಒಂದು ವೇಳೆ ಸಂತ್ರಸ್ತರಿಗೆ ಮನೆ ಸಿಗದೇ ಹೋದರೆ ಅದಕ್ಕೆ ಅಧಿಕಾರಿಗಳನ್ನೆ ಹೊಣೆ ಮಾಡಲಾಗುವುದು ಮತ್ತು ಮನೆ ನಿರ್ಮಾಣದ ವೆಚ್ಚವನ್ನು ಅಧಿಕಾರಿಗಳಿಂದಲೇ ವಸೂಲಿ ಮಾಡಲಾಗುವುದು ಎಂದು ದತ್ತು ಎಚ್ಚರಿಕೆ ನೀಡಿದರು.
ಮಾನವಹಕ್ಕುಗಳ ಆಯೋಗದ ಸದಸ್ಯರಾದ ಡಿ.ಮುರುಗೇಶ್, ಜ್ಯೋತಿಕ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಾಲ್ಕು ಕೋರ್ಟ್ ಹಾಲ್‍ಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದು, ಇಲ್ಲಿ ದೌರ್ಜನ್ಯ ಪ್ರಕರಣಗಳ ಬಗ್ಗೆ ಬಹಿರಂಗ ವಿಚಾರಣೆ ನಡೆಯಲಿದೆ. ನಾಳೆ ತೃತೀಯ ಲಿಂಗಿಗಳ ಸಮಸ್ಯೆಗಳ ಜತೆಗೆ ವಿವಿಧ ಪ್ರಕರಣಗಳ ವಿಚಾರಣೆಯೂ ನಡೆಯಲಿದೆ. ಅಂತಿಮವಾಗಿ ರಾಜ್ಯ ಪೆÇಲೀಸ್ ಮಹಾನಿರ್ದೇಶಕರ ಜತೆ ಆಯೋಗದ ಅಧ್ಯಕ್ಷರು ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ