ಬೆಂಗಳೂರು, ಆ.2- ಆದಾಯ ತೆರಿಗೆ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಐವರು ಆಪ್ತರಿಗೆ ನಗರದ ಆರ್ಥಿಕ ಅಪರಾಧ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರು ಇಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ತಲಾ 50 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್ ನೀಡಲು ಸೂಚಿಸಿದ ನ್ಯಾಯಾಲಯ ಐವರಿಗೂ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ, ವಿಚಾರಣೆಯನ್ನು ಸೆ.20ಕ್ಕೆ ಮುಂದೂಡಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಐಟಿ ಕಾಯಿದೆ ಸೆಕ್ಷನ್ 277, 278, 193, 199, ಹಾಗೂ 120(ಬಿ) ಅಡಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.ಎಂ.ಎಸ್. ಆಳ್ವಾ ಅವರು ಡಿ.ಕೆ.ಶಿವಕುಮಾರ್ಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು.
ಸಮನ್ಸ್ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್, ಅವರ ಆಪ್ತರಾದ ಸಚಿನ್, ನಾರಾಯಣ, ರಾಜೇಂದ್ರ, ಸುನೀಲ್ ಕುಮಾರ್ ಶರ್ಮಾ, ಹನುಮಂತಯ್ಯ ಅವರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ನವದೆಹಲಿಯ ಅವರ ನಿವಾಸದ ಮೇಲೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿ, ಡಿಕೆ ಸಹೋದರರ ವಿರುದ್ಧ ದೂರು ದಾಖಲಿಸಿದ್ದರು. ಶಿವಕುಮಾರ್ ಜತೆ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ಹನುಮಂತಯ್ಯ ಮತ್ತು ರಾಜೇಂದ್ರಗೂ ಸಮನ್ಸ್ ಜಾರಿಯಾಗಿತ್ತು.