ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಬೇಡ: ಕಾಂಗ್ರೆಸ್ ಸಚಿವರ ಅಭಿಪ್ರಾಯ

 

ಬೆಂಗಳೂರು, ಆ.2- ಮುಂದಿನ ಅಕ್ಟೋಬರ್‍ನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಬೇಡ ಎಂದು ಕಾಂಗ್ರೆಸ್ ಸಚಿವರು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನಡೆಸಿದ ಔತಣಕೂಟದಲ್ಲಿ ಭಾಗವಹಿಸಿದ ಕಾಂಗ್ರೆಸ್‍ನ ಬಹುತೇಕ ಸಚಿವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದಾಗಿ ಈಗಾಗಲೇ ಹೈಕಮಾಂಡ್ ಘೋಷಣೆ ಮಾಡಿದೆ. ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಇದನ್ನು ಸಹಿಸಿಕೊಳ್ಳುತ್ತೇವೆ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಂದಾಣಿಕೆ ಬೇಡ. ಒಂದು ವೇಳೆ ಹೊಂದಾಣಿಕೆ ಮಾಡಿಕೊಂಡರೆ ಕಾಂಗ್ರೆಸ್‍ಗೆ ಭಾರೀ ಹಿನ್ನಡೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಚರ್ಚೆಯನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ಸಿದ್ದರಾಮಯ್ಯ, ಸ್ಥಳೀಯ ಸಂಸ್ಥೆಗಳ ಹೊಂದಾಣಿಕೆಗೆ ಇನ್ನೂ ಕಾಲಾವಕಾಶವಿದೆ. ಆ ಬಗ್ಗೆ ಮಾತುಕತೆ ಬೇಡ ಎಂದು ತಡೆದಿದ್ದಾರೆ.

ಸಭೆಯಲ್ಲಿ ಜೆಡಿಎಸ್ ಪಾಳಯದಿಂದ ಅಸಹಕಾರ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಶಾಸಕರು ಅಸಮಾಧಾನ ತೋಡಿಕೊಂಡಿದ್ದಾರೆ. ಇಲಾಖಾವಾರು ಚರ್ಚೆಯಲ್ಲಿ ವಿಸ್ತೃತ ಚರ್ಚೆಗೆ ಅವಕಾಶವನ್ನೇ ನೀಡುವುದಿಲ್ಲ. ಸಮಯ ಜಾಸ್ತಿಯಾಯಿತು ಎಂದು ಮುಖ್ಯಮಂತ್ರಿಯವರು ಎದ್ದು ಹೋಗುತ್ತಿದ್ದಾರೆ. ಕೆಲವು ವಿಚಾರಗಳಲ್ಲಿ ಸಚಿವ ಎಚ್.ಡಿ.ರೇವಣ್ಣ ಹಸ್ತಕ್ಷೇಪ ಮಾಡುತ್ತಾರೆ. ಅಧಿಕಾರಿಗಳ ವರ್ಗಾವಣೆಯಲ್ಲೂ ಈ ರೀತಿಯ ಬೆಳವಣಿಗೆಗಳಾಗಿವೆ. ನಮ್ಮ ಕಾಂಗ್ರೆಸ್ ಪಾಲಿಗೆ ಬಂದಿರುವ ಇಲಾಖೆಗಳಲ್ಲಿ ಮುಕ್ತವಾಗಿ ಆಡಳಿತ ನಡೆಸಲು ಆಗುತ್ತಿಲ್ಲ. ಕೆಲವೊಮ್ಮೆ ಯಾವ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಯಾವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಇರುವುದಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸಚಿವರು ಅಸಮಾಧಾನ ಹೊರ ಹಾಕಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ನನಗೂ ಈ ರೀತಿಯ ಕಹಿ ಅನುಭವಗಳಾಗಿವೆ. ಕುಮಾರಸ್ವಾಮಿ ಮತ್ತು ದೇವೇಗೌಡರ ಜತೆ ಚರ್ಚೆ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸೋಣ, ಯಾರೂ ಬಹಿರಂಗವಾಗಿ ಹೇಳಿಕೆಗಳನ್ನು ನೀಡಬೇಡಿ ಎಂದು ಸಮಾಧಾನ ಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ