ಬೆಂಗಳೂರು: ಕರ್ನಾಟಕದ 105 ನಗರ ಸ್ಥಳೀಯ ಸಂಸ್ಥೆಗಳ 2709 ವಾರ್ಡ್ಗಳ ಚುನಾವಣಾ ದಿನಾಂಕ ಪ್ರಕಟವಾಗಿದೆ. ಆಗಸ್ಟ್ 29 ರಂದು ಮತದಾನ ನಡೆಯಲಿದ್ದು, ಸೆಪ್ಟೆಂಬರ್ 1 ರಂದು ಮತ ಎಣಿಕೆ ನಡೆಯಲಿದೆ.
ಗುರುವಾರ ಮಧ್ಯಾಹ್ನ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಆಯುಕ್ತ ಶ್ರೀನಿವಾಸಾಚಾರಿ ಸುದ್ದಿಗೋಷ್ಠಿ ನಡೆಸಿ ವಿವರಗಳನ್ನು ನೀಡಿದರು. 105 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಸಕಲ ತಯಾರಿ ನಡೆದಿದೆ. ಚುನಾವಣೆಗೆ ಅಧಿಕಾರಿಗಳನ್ನು ನಿಯೋಜನೆಗೊಳಿಸಲಾಗಿದ್ದು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
29 ನಗರ ಸಭೆ, 53 ಪುರಸಭೆ, 23 ಪಟ್ಟಣ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣಾ ಇವಿಎಂ ಬಳಕೆ ಮಾಡಲಾಗುತ್ತದೆ. ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆಗಳ ಚುನಾವಣಾ ತಡೆ ಕೋರಿ ಹೈಕೋರ್ಟ್ನಲ್ಲಿ ಪ್ರಕರಣ ಇದೆ. ಹೀಗಾಗಿ ಈ ಮೂರು ಪಾಲಿಕೆಗಳಿಗೆ ಅಧಿಸೂಚನೆ ಪ್ರಕಟಣೆ ಮಾಡಿಲ್ಲ. ಹೈಕೋರ್ಟ್ ಆದೇಶದ ಬಳಿಕ ಚುನಾವಣಾ ದಿನಾಂಕ ಪ್ರಕಟ ಮಾಡಲಾಗುವುದು ಎಂದು ಶ್ರೀನಿವಾಸಾಚಾರಿ ತಿಳಿಸಿದರು.