ಬೆಂಗಳೂರು: ದೇಶದಲ್ಲಿ ದಿನೇದಿನೇ ಅಗಾಧವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ವಲಯದ ಸುಧಾರಣೆಗೆ ಕೇಂದ್ರ ಸರಕಾರ ಮುಂದಾಗಿದ್ದು, ಇದರಲ್ಲಿ ಭಾರತದ ಪ್ರಾಬಲ್ಯವನ್ನು ವೃದ್ಧಿಸಲು ಹೊಸ ನೀತಿಯನ್ನು ರೂಪಿಸುತ್ತಿದೆ.
ಒಂದು ಕಡೆ ಗ್ರಾಹಕರಿಗೆ ಅಮೆಜಾನ್, ಫ್ಲಿಪ್‌ಕಾರ್ಟ್ ಮುಂತಾದ ಇ-ಕಾಮರ್ಸ್ ತಾಣಗಳಲ್ಲಿ ಭಾರಿ ಡಿಸ್ಕೌಂಟ್‌ಗಳಿಗೆ ಕಡಿವಾಣ ಬೀಳುವ ಆತಂಕ ಇದ್ದರೂ, ಈಗಾಗಲೇ ಭಾರಿ ಡಿಸ್ಕೌಂಟ್‌ಗಳ ಯುಗ ಮುಕ್ತಾಯವಾಗಿರುವುದರಿಂದ, ಒಟ್ಟಾರೆಯಾಗಿ ಸ್ವದೇಶಿ ಕಂಪನಿಗಳು ಹಾಗೂ ಉತ್ಪಾದನೆಯನ್ನು ಉತ್ತೇಜಿಸಲು ಇಂಥ ನೀತಿ ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ದರಗಳ ಮೇಲೆ ಪ್ರಭಾವಕ್ಕೆ ನಿಯಂತ್ರಣ
ಇ-ಕಾಮರ್ಸ್ ನೀತಿಯ ಕರಡಿನ ಪ್ರಮುಖಾಂಶಗಳಲ್ಲಿ ಆನ್‌ಲೈನ್ ವಲಯದ ಕಂಪನಿಗಳ ಸಮೂಹವು ತನ್ನ ಅಧೀನ ಕಂಪನಿ ಅಥವಾ ಸಂಬಂಧವಿರುವ ಕಂಪನಿಯ ಮೂಲಕ ಭಾರಿ ಪ್ರಮಾಣದಲ್ಲಿ ಉತ್ಪನ್ನಗಳನ್ನು ಖರೀದಿಸಿ, ಮಾರುಕಟ್ಟೆಯಲ್ಲಿ ದರಗಳ ಮೇಲೆ ಪ್ರಭಾವ ಬೀರುವುದನ್ನು ನಿಷೇಧಿಸಲಾಗಿದೆ. ದಿಗ್ಗಜ ಆನ್‌ಲೈನ್ ಕಂಪನಿಯೊಂದು ತನ್ನ ಅಧೀನ ಕಂಪನಿಯೊಂದರ ಮೂಲಕ ಮೊಬೈಲ್, ಫ್ರಿಡ್ಜ್, ವಾಷಿಂಗ್ ಮೆಶೀನ್ ಇತ್ಯಾದಿಗಳನ್ನು ವ್ಯಾಪಕವಾಗಿ ಖರೀದಿಸಿ, ಮಾರುಕಟ್ಟೆಯ ದರದ ಮೇಲೆ ಪ್ರಭಾವ ಬೀರುವಂತೆ, ಅಗ್ಗದ ದರದಲ್ಲಿ ಮಾರಾಟ ಮಾಡುವ ಪದ್ಧತಿಗೆ ನಿರ್ಬಂಧ ಅನ್ವಯವಾಗಲಿದೆ. ಇ-ಕಾಮರ್ಸ್ ದೈತ್ಯ ಕಂಪನಿಗಳ ರಿಟೇಲ್ ತಂತ್ರಗಾರಿಕೆಗೆ ಅಂಕುಶ ಬೀಳಲಿದೆ.
ಕಂಪನಿಗಳು ತಮ್ಮ ಅಧೀನ ಕಂಪನಿ ಅಥವಾ ಸಂಬಂಧಿಸಿದ ಕಂಪನಿಗಳ ಮೂಲಕ ಬ್ರ್ಯಾಂಡೆಡ್ ಸ್ಮಾರ್ಟ್‌ಫೋನ್, ವೈಟ್ ಗೂಡ್ಸ್, ಫ್ಯಾಷನ್ ವಸ್ತುಗಳನ್ನು , ದರಗಳ ಮೇಲೆ ಪ್ರಭಾವ ಬೀರುವಂತೆ ಖರೀದಿಸಿಟ್ಟುಕೊಳ್ಳುವಂತಿಲ್ಲ ಎಂದು ಕರಡು ನೀತಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ಸಲಹೆಯನ್ನು ಗಂಭೀರವಾಗಿ ಸರಕಾರ ಪರಿಗಣಿಸಿದರೆ, ಇ-ಕಾಮರ್ಸ್ ದಿಗ್ಗಜರ ರಿಟೇಲ್ ದರ ತಂತ್ರಗಾರಿಕೆಗೆ ಹೊಡೆತ ಬೀಳಲಿದೆ.
ದೇಶೀಯ ಉತ್ಪಾದನೆಗೆ ಭಾರಿ ಉತ್ತೇಜನ
ಕರಡು ನೀತಿಯ ಪ್ರಕಾರ ಭಾರತೀಯ ಮೂಲದ ಆನ್‌ಲೈನ್ ಕಂಪನಿಗಳಿಗೆ ಶೇ.100ರಷ್ಟು ದೇಶೀಯವಾಗಿ ಉತ್ಪಶಾದಿಸಿದ ಉತ್ಪನ್ನಗಳನ್ನು ದಾಸ್ತಾನು ಇಟ್ಟುಕೊಳ್ಳಲು ಅವಕಾಶ ನೀಡಬೇಕು. ಈ ರಿಯಾಯಿತಿಯು ವಿದೇಶಿ ಮೂಲದ ಇ-ಕಾಮರ್ಸ್ ಕಂಪನಿಗಳಿಗೆ ಹಾಗೂ ವಿದೇಶಿ ಹೂಡಿಕೆಯ ಪ್ರಾಬಲ್ಯ ಹೊಂದಿರುವ ಕಂಪನಿಗಳಿಗೆ ಸಿಗಲಾರದು.
ಭಾರತೀಯ ಸ್ಥಾಪಕರಿಗೇ ಅಧಿಕಾರ
ಶೇ.49 ಮೀರದಂತೆ ವಿದೇಶಿ ಹೂಡಿಕೆ ಹೊಂದಿರುವ ಇ-ಕಾಮರ್ಸ್ ಕಂಪನಿಗಳಲ್ಲಿ ಭಾರತೀಯ ಮೂಲದ ಸ್ಥಾಪಕರಿಗೆ ಹೆಚ್ಚಿನ ಹಕ್ಕು, ಅಧಿಕಾರ ಒದಗಿಸಲೂ ಕರಡು ಅವಕಾಶ ಕಲ್ಪಿಸಿದೆ. ಹಾಗೂ ಭಾರತೀಯ ಆಡಳಿತಮಂಡಳಿಯೇ ಕಂಪನಿಯನ್ನು ನಿಯಂತ್ರಿಸಲಿದೆ.
ಕಠಿಣ ನಿಯಂತ್ರಕ ವ್ಯವಸ್ಥೆ
ಇ-ಕಾಮರ್ಸ್ ವಲಯದಲ್ಲಿ ಅಹವಾಲುಗಳನ್ನು ಹಾಗೂ ವಿದೇಶಿ ಹೂಡಿಕೆ ಕುರಿತ ವಿವಾದಗಳನ್ನು ನಿರ್ವಹಿಸಲು ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕ ವಿಭಾಗ ತೆರೆಯಲು ಶಿಫಾರಸು ಮಾಡಲಾಗಿದೆ. ಇ-ಕಾಮರ್ಸ್ ಕಂಪನಿಗಳ ಸ್ವಾಧೀನ-ವಿಲೀನ ಪ್ರಕ್ರಿಯೆಗಳಲ್ಲಿ ಕಾಂಪಿಟೇಶನ್ ಕಮೀಶನ್ ಇತ್ಯಾದಿ ನಿಯಂತ್ರಕ ವ್ಯವಸ್ಥೆಗಳು ಕೂಲಂಕುಷ ನಿಗಾ ವಹಿಸಬೇಕು ಎಂದು ತಿಳಿಸಿದೆ. ಇತ್ತೀಚೆಗೆ ವಾಲ್‌ಮಾರ್ಟ್, ಫ್ಲಿಪ್‌ಕಾರ್ಟ್ ಖರೀದಿಯ ಡೀಲ್ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ. ಡಿಜಿಟಲ್ ಎಕಾನಮಿಯನ್ನು ನಿಯಂತ್ರಿಸಲು ಪ್ರತ್ಯೇಕ ಹಾಗೂ ಒಂದೇ ಪ್ರಾಧಿಕಾರದ ಅಗತ್ಯ ಇದೆ ಎಂದಿದೆ.
ಭಾರಿ ದರ ಕಡಿತಕ್ಕೆ ಅವಧಿ
ಇ-ಕಾಮರ್ಸ್ ಕಂಪನಿಗಳು ಘೋಷಿಸುವ ಭಾರಿ ದರ ಕಡಿತಗಳಿಗೆ ನಿರ್ದಿಷ್ಟ ಗರಿಷ್ಠ ಅವಧಿಯನ್ನು ನಿಗದಿಪಡಿಸಬೇಕು. ಇದರಿಂದ ಮಾರುಕಟ್ಟೆಯಲ್ಲಿ ದರ ನಿಯಂತ್ರಣ ಸಾಧ್ಯ ಎಂದು ಸಲಹೆ ಮಾಡಿದೆ.
ಡೇಟಾ ಸಂಗ್ರಹ
ಸರಕಾರ ಇ-ಕಾಮರ್ಸ್ ಕಂಪನಿಗಳ ಡೇಟಾ ಸಂಗ್ರಹಕ್ಕೂ ವ್ಯವಸ್ಥೆ ಕಲ್ಪಿಸುತ್ತಿದೆ. ಕಂಪನಿಗಳ ವಹಿವಾಟು, ಗ್ರಾಹಕರು ಇತ್ಯಾದಿ ವಿವರಗಳು ಇದರಲ್ಲಿ ಲಭ್ಯವಾಗಲಿದ್ದು, ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಅಗತ್ಯ ಇದ್ದಾಗ ಭಾರತ ಸರಕಾರ ಈ ವಿವರಗಳನ್ನು ಪರಿಶೀಲಿಸಲಿದೆ. ಇ-ಕಾಮರ್ಸ್ ಕಂಪನಿಗಳಿಗೆ ಜಿಎಸ್‌ಟಿ ಸರಳಗೊಳಿಸಲೂ ಸಲಹೆ ನೀಡಿದೆ.
ಇ-ಕಾಮರ್ಸ್ ನೀತಿಯ ಕರಡು ಪ್ರತಿ ಇನ್ನೂ ಎಲ್ಲರ ಕೈ ಸೇರಿಲ್ಲ. ಹೀಗಿದ್ದರೂ, ಮೇಲ್ನೋಟಕ್ಕೆ ದೇಶೀಯ ಕಂಪನಿಗಳಿಗೆ ನೀತಿಯಲ್ಲಿ ಉತ್ತೇಜನ ನೀಡಲಾಗಿದೆ. ಆನ್‌ಲೈನ್ ವಹಿವಾಟಿನ ಸುಧಾರಣೆಗೆ ಪುಷ್ಟಿ ನೀಡುವಂತಿದೆ. ಆನ್‌ಲೈನ್ ತಾಣಗಳಲ್ಲಿ ಭಾರಿ ಡಿಸ್ಕೌಂಟ್‌ಗಳ ಟ್ರೆಂಡ್ ಈಗಾಗಲೇ ಮುಕ್ತಾಯವಾಗಿರುವುದರಿಂದ, ಭಾರಿ ಡಿಸ್ಕೌಂಟ್ ಕೈ ತಪ್ಪಲಿದೆ ಎಂಬ ಆತಂಕ ಗ್ರಾಹಕರಿಗೆ ಅನಗತ್ಯ – ಸುಭಾಷ್