ಬೆಳಗಾವಿ:ಜು-೩೧: ಉತ್ತರ ಕರ್ನಾಟಕದ ಪ್ರತ್ಯೇಕ ಧ್ವಜ ಹಾರಿಸಲು ಮುಂದಾದ ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡ ನಾಗೇಶ ಗೋಲಶೆಟ್ಟಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಉತ್ತರ ಕರ್ನಾಟಕ ವಿಕಾಸ ವೇದಿಕೆ ಹಾಗೂ ಉತ್ತರ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟಗಾರರು, ಮಠಾಧೀಶರು ಪ್ರತಿಭಟನೆ ನಡೆಸಿದ್ದು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾಗಿಯಾಗಿದ್ದಾರೆ.
ಈ ವೇಳೆ ಉತ್ತರ ಕರ್ನಾಟಕದ ಪ್ರತ್ಯೇಕ ಧ್ವಜ ಹಾರಿಸಲು ಮುಂದಾದ ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡ ನಾಗೇಶ ಗೋಲಶೆಟ್ಟಿ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ನಾವು ಬಂದಿಲ್ಲ. ಅಖಂಡ ಕರ್ನಾಟಕದ ಅಭಿವೃದ್ಧಿ ಆಗಬೇಕು ಎಂದು ಬಂದಿದ್ದೇವೆ ಎಂದು ಸ್ವಾಮೀಜಿಗಳು ಬುದ್ಧಿವಾದ ಹೇಳಿದರು.
ಈ ವೇಳೆ ಮಾತನಾಡಿದ ನಾಗನೂರ ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಎಲ್ಲ ಸರ್ಕಾರಗಳೂ ನಿರಂತರವಾಗಿ ಉತ್ತರ ಕರ್ನಾಟಕ ಅಲಕ್ಷ್ಯ ಮಾಡುತ್ತಾ ಬಂದಿವೆ. ದನಿ ಎತ್ತಿರುವುದರಿಂದ ಜನಪ್ರತಿನಿಧಿಗಳು ಏನೇನೋ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಉತ್ತರ ಕರ್ನಾಟಕದಿಂದ ಪ್ರಯೋಜನ ಇಲ್ಲ, ಬೆಂಗಳೂರಿನ ಹಣ ಅಲ್ಲಿಗೆ ಕೊಡುತ್ತಿದ್ದೇವೆ ಎನ್ನುವ ಮಾತುಗಳನ್ನು ಆಡಬಾರದು ಎಂದು ಮುಖ್ಯಮಂತ್ರಿಗೆ ತಿರುಗೇಟು ನೀಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಮುಖಂಡರಾದ ಭೀಮಪ್ಪ ಗಡಾದ, ಅಶೋಕ ಪೂಜಾರಿ, ನಾಗೇಶ ಗೋಲಶೆಟ್ಟಿ, ಅಡಿವೇಶ ಇಟಗಿ ಉಪಸ್ಥಿತರಿದ್ದರು.