ವ್ಲಾಡಿವೊಸ್ಟಾಕ್ (ರಷ್ಯಾ): ರಷ್ಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಅಂತಿಮ ಹಣಾಹಣಿಯಲ್ಲಿ ಭಾರತದ ಭರವಸೆಯ ಆಟಗಾರ ಸೌರಭ್ ವರ್ಮಾ ಪ್ರಶಸ್ತಿ ಜಯಿಸಿದ್ದಾರೆ.
ಜಪಾನ್‌ನ ಕೊಕಿ ವಾಟನೆಬಲ್ ಅವರ ವಿರುದ್ಧ 8-21, 21-12, 21-17 ಅಂತರದಲ್ಲಿ ಜಯಿಸಿದ ಸೌರಭ್ ಬರೋಬ್ಬರಿ 52 ಲಕ್ಷ ರೂ. ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಒಂದು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಸೌರಭ್ ನಿಧಾನ ಗತಿಯಲ್ಲಿ ಆಟ ಪ್ರಾರಂಭಿಸಿದ್ದರೂ ಸಹ ಉತ್ತಮ ಪಾಯಿಂಟ್ ಗಳ ಪಡೆಯುವಲ್ಲಿ ಯಶಸ್ವಿಯಾದರು.
ವಿಶ್ವ ನಂ.37ನೇ ಶ್ರೇಯಾಂಕಿತ ಸೌರಭ್ ಶನಿವಾರ ನಡೆದ ಸೆಮಿ ಫೈನಲ್ಸ್ ನಲ್ಲಿ ಭಾರತದ ಇನ್ನೋರ್ವ ಆಟಗಾರ ಮಿಥುನ್ ಮಂಜುನಾಥ್ ಅವರನ್ನು ಮಣಿಸಿದ್ದರು.
ಕಳೆದ ವರ್ಷ ಗಾಯದ ಸಮಸ್ಯೆಯಿಂದ ಬಳಲಿದ್ದ ಸೌರಭ್ ಅವರಿಗೆ ೨೦೧೬ರ ಚೈನೀಸ್ ತೈಪೆ ಮಾಸ್ಟರ್ಸ್ ಚಾಂಪಿಯನ್ ಶಿಪ್ ಪ್ರಶಸ್ತಿ ನಂತರದಲ್ಲಿ ಲಭಿಸಿದ ಮೊದಲ ಚಾಂಪಿಯನ್ ಪಟ್ಟ ಇದಾಗಿದೆ.
ಮಿಶ್ರ ಡಬಲ್ಸ್ ನಲ್ಲಿ ಭಾರತಕ್ಕೆ ಸೋಲು
ರಷ್ಯಾ ಓಪನ್ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ನಲ್ಲಿ ಭಾರತ ಆಟಗಾರರಾದ ಕುಹೂ ಗರ್ಗ್ ಮತ್ತು ರೋಹನ್ ಕಪೂರ್ ರಷ್ಯಾದ ವ್ಲಾಡಿಮಿರ್ ಇವಾನೊವ್ ಹಾಗೂ ಕೊರಿಯಾ ಮಿನ್ ಕುಂಗ್ ಕಿಮ್ ಅವರುಗಳ ವಿರುದ್ಧ ಪರಾಜಿತರಾಗಿದ್ದಾರೆ. ಭಾರತೀಯ ಜೋಡಿಯನ್ನು ರಷ್ಯಾ ಆಟಗಾರರು 19-21, 17-21 ಅಂತರದಲ್ಲಿ ಸೋಲಿಸಿದ್ದಾರೆ.