ಕರುಣಾನಿಧಿ ಆರೋಗ್ಯ ಸ್ಥಿರ, ವದಂತಿಗಳನ್ನು ನಂಬಬೇಡಿ: ಬೆಂಬಲಿಗರಲ್ಲಿ ಎಂಕೆ ಸ್ಟಾಲಿನ್ ಮನವಿ

ಚೆನ್ನೈ: ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ, ಕಲೈನರ್ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಭಾನುವಾರ ರಾತ್ರಿ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರಗೊಂಡಿತ್ತು. ಸದ್ಯ ಚೆನ್ನೈನ ಕಾವೇರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ರಾತ್ರಿ ಆಸ್ಪತ್ರೆ ಮಂಡಳಿ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‍ನಲ್ಲಿ ಕರುಣಾನಿಧಿ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದೆ. ರಾತ್ರಿ ಮನೆಗೆ ತೆರಳುವ ಮುನ್ನ ಮಾತನಾಡಿದ ಪುತ್ರ ಎಂ.ಕೆ ಸ್ಟಾಲಿನ್, ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ, ಕರುಣಾನಿಧಿ ಚೇತರಿಸಿಕೊಳ್ಳುತ್ತಿದ್ದಾರೆ. ಬೆಂಬಲಿಗರು ಶಾಂತಿಯಿಂದ ವರ್ತಿಸಿ, ಮನೆಗೆ ತೆರಳಬೇಕು ಎಂದು ಮನವಿ ಮಾಡಿದರು.

ಸಿಎಂ ಎಡಪ್ಪಾಡಿ ಪಳನಿಸ್ವಾಮಿ ತಮ್ಮ ಕೊಯಂಬತ್ತೂರು ಪ್ರವಾಸ ಮೊಟಕುಗೊಳಿಸಿ, ಕಾವೇರಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಆಸ್ಪತ್ರೆ ಮತ್ತು ಗೋಪಾಲಪುರಂನ ಕರುಣಾನಿಧಿ ನಿವಾಸದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಬೆಂಬಲಿಗರು ಕರುಣಾನಿಧಿ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಆಸ್ಪತ್ರೆ ಮತ್ತು ಗೋಪಾಲಪುರಂ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಣ್ಣಾ ವಿವಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ