ಕುರುಕುರೆಯಲ್ಲಿ ಪ್ಲಾಸ್ಟಿಕ್ ವದಂತಿ: ಫೇಸ್‌ಬುಕ್‌, ಟ್ವಿಟ್ಟರ್ ಮೇಲೆ ಕೇಸ್ ಜಡಿದ ಪೆಪ್ಸಿ

ಹೊಸದಿಲ್ಲಿ: ಕುರುಕುರೆಯಲ್ಲಿ ಪ್ಲಾಸ್ಟಿಕ್‌ ಇದೆ ಎಂಬ ವದಂತಿ ಹರಡಿರುವುದಕ್ಕೆ ಫೇಸ್‌ಬುಕ್‌, ಟ್ವಿಟ್ಟರ್ ಸೇರಿ ಇತರೆ ಸಾಮಾಜಿಕ ಜಾಲತಾಣಗಳ ಮೇಲೆ ಪೆಪ್ಸಿ ಕಂಪನಿ ಕೇಸ್ ಹಾಕಿದೆ. ಮಾನನಷ್ಟ ಮತ್ತು ಅಮಾನವೀಯ ವಿಷಯವನ್ನು ಹರಡಲು ನೆರವಾಗಿದ್ದಕ್ಕೆ 2.1 ಕೋಟಿ ರೂ. ಯಷ್ಟು ನಷ್ಟ ಕಟ್ಟಿಕೊಡಬೇಕೆಂದು ದಿಲ್ಲಿ ಹೈಕೋರ್ಟ್‌ನಲ್ಲಿ ಸಿವಿಲ್ ಕೇಸು ಜಡಿದಿದೆ.

ಈ ಹಿನ್ನೆಲೆ, ಈ ವದಂತಿ ಹರಡಿದ ಬಳಕೆದಾರರ ಸಂದೇಶಗಳನ್ನು ಕಾನೂನು ಕ್ರಮಗಳಿಗಾಗಿ ಸಾಮಾಜಿಕ ಜಾಲತಾಣಗಳು ಕೋರ್ಟ್‌ಗೆ ದಾಖಲೆಗಳನ್ನು ನೀಡಿದೆ. ಜುಲೈ 20ರಂದು ನಿಖಿಲ್ ಜೋಯಿಸ್ ಎಂಬ ಟ್ವಿಟ್ಟರ್ ಬಳಕೆದಾರನ ಅಕೌಂಟ್‌ನ ಮಾಹಿತಿಗಳನ್ನು ಕೋರ್ಟ್‌ಗೆ ನೀಡುತ್ತಿರುವುದಾಗಿ ಟ್ವಟ್ಟರ್‌ ಈ ಮೇಲ್ ಮಾಡಿತ್ತು. ಜೂನ್ 2015ರಲ್ಲಿ ಕುರುಕುರೆಯಲ್ಲಿ ಪ್ಲಾಸ್ಟಿಕ್ ಅಂಶ ಇದೆ ಎಂಬ ವೀಡಿಯೋವೊಂದನ್ನು ಇವರು ಪೋಸ್ಟ್‌ ಮಾಡಿದ್ದರು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ರೀತಿ ಭಾರತದ ನೂರಾರು ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೂ ಸೂಚಿಸಲಾಗಿದೆ. ಫೇಸ್‌ಬುಕ್, ಟ್ವಿಟ್ಟರ್, ಯೂ ಟ್ಯೂಬ್ ಹಾಗೂ ಇನ್ಸ್‌ಟಾಗ್ರಾಮ್‌ ಮೇಲೆ ಪೆಪ್ಸಿ ಕಂಪನಿ ಕೇಸ್ ಹಾಕಿದೆ.

ಕುರುಕುರೆಯಲ್ಲಿ ಹೊತ್ತಿಕೊಳ್ಳುವ ಪ್ಲಾಸ್ಟಿಕ್ ಅಂಶವಿದ್ದು, ಅದನ್ನು ಮನುಷ್ಯರು ತಿನ್ನುವುದು ಸುರಕ್ಷಿತವಲ್ಲ ಎಂಬ ವೀಡಿಯೋ ಹಾಗೂ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದೆ. ಇದು ಸುಳ್ಳು ಎಂದು ಫೆಪ್ಸಿ ಕಂಪನಿ ಆರೋಪಿಸಿತ್ತು.

ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾಮಾಜಿಕ ಜಾಲತಾಣ ಬಳಕೆದಾರ ಜೋಯಿಸ್, ಕುರುಕುರೆ ಹಾಗೂ ಪ್ಲಾಸ್ಟಿಕ್ ಬಗ್ಗೆ ನಾವು ಜೋಕ್ ಮಾಡುತ್ತಿರುತ್ತೇವೆ. ನಾನು ಪ್ಲಾ ಎಂದಷ್ಟೇ ಹಾಕಿದ್ದು ಪ್ಲಾಸ್ಟಿಕ್ ಎಂದು ಹಾಕಿರಲಿಲ್ಲ. ಹಳೆಯ ಪೋಸ್ಟ್‌ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ನಿಷ್ಪ್ರಯೋಜಕ ಪ್ರಯತ್ನ ಎಂದು ಅವರು ಹೇಳಿದ್ದು, ಈ ವಿಚಾರವಾಗಿ ಸದ್ಯಕ್ಕೆ ಕಾನೂನು ಸಹಾಯ ಪಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ವೀಡಿಯೋ ಅಥವಾ ಪೋಸ್ಟ್‌ಗಳಲ್ಲಿರುವ ವಿಚಾರ ಸುಳ್ಳು ಎಂದು ಮುಂಚೆಯೇ ಗೊತ್ತಿದ್ದರೂ ಸಾಮಾಜಿಕ ಜಾಲತಾಣ ಕಂಪನಿಗಳು ಪೋಸ್ಟ್‌ಗಳನ್ನು ತೆಗೆದುಹಾಕಲು ನಿರಾಕರಿಸಿದ್ದವು ಎಂದು ಕೋರ್ಟ್‌ಗೆ ಮಾಹಿತಿ ನೀಡಿದೆ. ಇದರಿಂದ ಕಂಪನಿಯ ಖ್ಯಾತಿ ಮತ್ತು ಅಭಿಮಾನಕ್ಕೆ ನಷ್ಟವಾಗಿದೆ ಎಂದು ಪೆಪ್ಸಿ ಕಂಪನಿ ಹೇಳಿದೆ.

ಈ ಹಿನ್ನೆಲೆ, ಸಾಮಾಜಿಕ ಜಾಲತಾಣಗಳಲ್ಲಿ ಕುರುಕುರೆ ಬಗ್ಗೆ ಪೋಸ್ಟ್ ಮಾಡಿದ್ದವರ ಮಾಹಿತಿಗಳನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಕೋರ್ಟ್ ಸಾಮಾಜಿಕ ಜಾಲತಾಣಗಳಿಗೆ ನಿರ್ದೇಶಿಸಿದೆ. ಆದರೆ, ಬಳಕೆದಾರ ಯಾವ ಖಾಸಗಿ ಮಾಹಿತಿಗಳನ್ನು ನೀಡಲಾಗುತ್ತದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇನ್ನು, ನಾಲ್ಕು ವಾರಗಳಲ್ಲಿ ಈ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ದಿಲ್ಲಿ ಹೈ ಕೋರ್ಟ್ ಸೂಚಿಸಿದ್ದು, ನವೆಂಬರ್ 14 ಕ್ಕೆ ಕೇಸ್ ಮುಂದೂಡಿದೆ.

ಇನ್ನು, ಈಗಾಗ್ಲೇ ಯುಆರ್‌ಎಲ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾಗಿ ಯು ಟ್ಯೂಬ್ ಹೇಳಿದ್ದು, ಫೇಸ್‌ಬುಕ್‌ ಹಾಗೂ ಟ್ವಿಟ್ಟರ್ ಈ ಬಗ್ಗೆ ಇನ್ನೂ ಕೋರ್ಟ್‌ಗೆ ಸ್ಪಷ್ಟನೆ ನೀಡಿಲ್ಲ. 2013 ರಿಂದ 2017ರವರೆಗೆ ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಲು ಪೆಪ್ಸಿ ಕಂಪನಿ ಹಲವು ಬಾರಿ ಯತ್ನ ನಡೆಸಿತ್ತು. ಈಗ, 2018ರಲ್ಲಿ ಮತ್ತೆ ಕೇಸ್ ಜಡಿಯುವ ಮೂಲಕ ತನ್ನ ಕಂಪನಿಗೆ ವಿಶ್ವಾಸಾರ್ಹತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಲು ಯತ್ನಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ