ಬಾಗಲಕೋಟೆ: ಜುಲೈ, 29 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಸಿರಿದಾನ್ಯಗಳನ್ನು ದಲ್ಲಾಳಿಗಳು ಸಂಸ್ಕರಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿರುವದರಿಂದ ರೈತರು ಆರ್ಥಿಕವಾಗಿ ಹಿಂದೆ ಉಳಿದಿದ್ದು, ಅದಕ್ಕಾಗಿ ಸಿರಿಧಾನ್ಯಕ್ಕೆ ಪೂರಕ ಮಾರುಕಟ್ಟೆ ಒದಗಿಸುವುದು ಅಗತ್ಯವಾಗಿದೆ ಎಂದು ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪವನರ ಹೇಳಿದರು.
ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ, ತೋಟಗಾರಿಕೆ, ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ತೋವಿವಿ ಹಾಗೂ ಇತರೆ ಸಂಸ್ಥೆಗಳ ಸಹಯೋಗದಲ್ಲಿ ಆತ್ಮ ಯೋಜನೆಯಡಿ ಹಮ್ಮಿಕೊಂಡ ಸಾವಯವ ಸಿರಿಧಾನ್ಯ ಹಾಗೂ ಸಿರಿಫಲ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಆರೋಗ್ಯದ ದೃಷ್ಠಿಯಿಂದ ಸಿರಿಧಾನ್ಯಗಳ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಹಾಗೂ ರೈತರ ಆರ್ಥಿಕವಾಗಿ ಸಬಲಗೊಳ್ಳುವಂತೆ ಮಾಡಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹಳೆಯ ಪರಂಪರೆಗಳಾದ ಕುಟ್ಟುವುದು, ಬೀಸುವುದರ ಜೊತೆಗೆ ಸಿರಿಧಾನ್ಯಗಳು ಸಹ ನಶಿಸಿ ಹೋಗುತ್ತಿದ್ದು, ಅಂತಹ ಪರಂಪರೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಅಲ್ಲಲ್ಲಿ ಕಾಣುತ್ತಿದ್ದೇವೆ. ಇಂದಿನ ಯುಗದಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದರೂ ಮಾರುಕಟ್ಟೆಯಲ್ಲಿ ಅದಕ್ಕೆ ಸೂಕ್ತ ಬೆಳೆ ದೊರೆಯದಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದರು.
ರೈತರಿಂದ ಪಡೆದುಕೊಂಡು ಸಿರಿಧಾನ್ಯಗಳನ್ನು ಸಂಸ್ಕರಿಸಿ ಪ್ಯಾಕೇಟ್ ಮಾಡಿ ಸಂಸ್ಥೆಯ ಲೇಬಲ್ ಅಂಟಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರಕಾರದ ಗಮನಕ್ಕೆ ತಂದು ಒಂದು ಕಂಪನಿ ಜೊತೆಗೆ ಟಯಾಪ ಮಾಡಿಕೊಂಡು ಬಾಗಲಕೋಟೆಯಲ್ಲಿಯೇ ಒಂದು ಪ್ರೋಸೆಸ್ ಯೂನಿಟ್ ಪ್ರಾರಂಭಿಸುವ ಕಾರ್ಯ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಬರಗಾಲ ಬಿದ್ದಿದ್ದು, ಈ ಬಾರಿ ಉತ್ತಮವಾದ ಮಳೆಯಾಗುವ ನೀರಿಕ್ಷೆ ಇತ್ತು. ಆದರು ತಕ್ಕ ಮಟ್ಟಿಗೆ ಮಳೆಯಾಗಿದ್ದು, ರೈತರು ಎಲ್ಲರೂ ಒಂದೇ ತರಹದ ಬೆಳೆ ಬೆಳೆಯದೇ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಬೇಕು. ಅಲ್ಲದೇ ರೈತರು ಇಂತಹ ಕೃಷಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯುವಂತ ವೈಜ್ಞಾನಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು. ಸಾವಯವ ಕೃಷಿಯಿಂದ ಬೆಳೆದ ಬೆಳೆಗಳಿಗೆ ನಗರದ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಇದರಿಂದ ರೈತರಿಗೆ ಆರ್ಥಿಕ ಅಭಿವೃದ್ದಿ ಸಾದ್ಯವಾಗುತ್ತದೆ ಎಂದರು.
ಈಗಾಗಲೇ ಸರಕಾರದಿಂದ ನಾಲಾಬಂದ, ಚೆಕ್ಡ್ಯಾಂ ನಿರ್ಮಿಸಲಾಗಿದ್ದು, ಬಾಗಲಕೋಟೆಯಲ್ಲಿ ಅತೀ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಮುಂದಿನ ಕೂಡಾ ಕೃಷಿ ಹೊಂಡದ ಅವಶ್ಯಕತೆಯನ್ನು ನಿಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ತೋಟಗಾರಿಕೆ ಬೆಳೆಗೆ ಹೆಚ್ಚು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿ ಬೆಳೆದ ಬೆಳೆಗಳು ರೈತರ ಹೊಲದಲ್ಲಿ ಕಾಣುವಂತೆ ಮಾಡಲು ತೋಟಗಾರಿಕೆ ವಿಜ್ಞಾನಿಗಳು ಶ್ರಮಿಸಬೇಕಿದೆ. ಈ ಎಲ್ಲ ಸಹಾಯ ಸಹಕಾರವನ್ನು ಸದುಪಯೋಗ ಪಡಿಸಿಕೊಂಡು ಆತ್ಮಹತ್ಯೆ ಯಂತಹ ಪಾಪ ಕಾರ್ಯಗಳಿಗೆ ಕೈ ಹಾಕಬಾರದೆಂದು ವಿನಂತಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನಾದಿಕಾಲದಿಂದಲೂ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದ್ದು, ಇತ್ತೀಚಿನ ಯುವ ಪೀಳಿಗೆ ಹೊಸ ಹೊಸ ಆಹಾರ ಪದ್ದತಿ ಅನುಸರಿಸುತ್ತಿರುವಾಗ ಹಿಂದೆ ಬೆಳೆದ ಪೌಷ್ಠಿಕ ಮತ್ತು ಅತಿಉಪಯುಕ್ತ ಸಿರಿಧಾನ್ಯ ನಶಿಸಿ ಹೋಗಬಾರದೆಂಬ ಉದ್ದೇಶದಿಂದ ಈ ಸಿರಿಧಾನ್ಯಗಳಿಗೆ ಪುನಚ್ಛೆತನ ಕೊಡಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ರೈತರಿಗೆ ವಿದ್ಯುತ್, ನೀರು ಹಾಗೂ ಬೆಳೆದ ಬೆಳೆಗೆ ಬೆಂಬಲ ಬೆಲೆ ದೊರಕಿಸಿ ಕೊಟ್ಟರೆ ಸಾಲ ಮನ್ನಾ ಮಾಡುವ ಬೇಡಿಕೆ ಇಡುವುದಿಲ್ಲ ಎಂದರು.
ಮುಂಬರುವ 2022 ಕ್ಕೆ ಸ್ವತಂತ್ರ ದೊರೆತು 75 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಆ 75 ವರ್ಷದ ಆಚರಣೆ ವೇಳೆಗೆ ಬೆಳೆದ ಬೆಳೆಗಳಿಗೆ ದ್ವಿಗುಣ ಲಾಭ ಪಡೆದು ಆರ್ಥಿಕ ಅಬಿವೃದ್ದಿ ಸಾಧಿಸಬೇಕೆಂಬುದು ಪ್ರಧಾನಿ ಮಂತ್ರಿಗಳ ಆಶಯವಾಗಿದೆ. ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ವಿಶ್ವವಿದ್ಯಾಲಯಗಳಿದ್ದು, ಕೃಷಿ, ತೋಟಗಾರಿಕೆ ಇಲಾಖೆ ಇದ್ದು, ರೈತರಿಗೆ ತಮ್ಮ ಜಮೀನಿನ ಮಣ್ಣಿನ ಗುಣಧರ್ಮಕ್ಕೆ ಅವಶ್ಯವಾದ ಬೆಳೆ ಬೆಳೆಯುವಂತ ತರಬೇತಿ ನೀಡಲಾಗುತ್ತಿದ್ದು, ಅದರ ಪ್ರಯೋಜನ ಜಿಲ್ಲೆಯ ರೈತರು ಪಡೆದುಕೊಳ್ಳಬೇಕೆಂದರು. ದೇಶಿಯ ಕೃಷಿ ಹಾಗೂ ಸಾವಯವ ಕೃಷಿ ಕಡೆಗೆ ಹೆಚ್ಚಿನ ಗಮನ ನೀಡಿ ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಶ್ರಮಿಸಬೇಕೆಂದರು.
ವಿಧಾನ ಪರಿಷತ್ ಸದಸ್ಯರಾದ ಹನಮಂತ ನಿರಾಣಿ, ತಾ.ಪಂ ಅದ್ಯಕ್ಷ ಚನ್ನನಗೌಡರ ಪರನಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಿರಿಧಾನ್ಯಗಳ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ಜಿ.ಪಂ ಸದಸ್ಯರಾದ ಮಾಂತೇಶ ಉದಪುಡಿ, ಬಾಯಕ್ಕ ಮೇಟಿ, ಶಶಿಕಲಾ ಯಡಹಳ್ಳಿ, ಹನಮವ್ವ ಕರೆಹೊಳಿ, ಶೋಭಾ ಬಿರಾದಾರ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ತೋವಿವಿಯ ವಿಸ್ತರಣಾಧಿಕಾರಿ ವಾಯ್.ಕೆ.ಕೋಟಿಕಲ್, ಕೃಷಿ ಜಂಟಿ ನಿರ್ದೇಶಕ ರಮೇಶಕುಮಾರ, ಕೃಷಿ ಇಲಾಖೆಯ ಉಪನಿರ್ದೇಶಕ ಕೊಂಗವಾಡ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
Bagalakot,Savayava Siridhanya mela