ಹುಬ್ಬಳ್ಳಿ, ಜು.28- ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಇಲ್ಲಿಯ ಜನಪ್ರತಿನಿಧಿಗಳೇ ಕಾರಣ. ನಂಜುಂಡಪ್ಪ ವರದಿ ಬಂದ ನಂತರ ಸಾಕಷ್ಟು ಜನ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಿದ್ದಾರೆ, ಆವಾಗ ಏಕೆ ಅಭಿವೃದ್ಧಿ ಮಾಡಲಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ನಿಲುವು ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬಾರದು. ಅಖಂಡ ಕರ್ನಾಟಕ ಆಗಿರಬೇಕು, ಪ್ರತ್ಯೇಕ ರಾಜ್ಯ ಎನ್ನುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಎಂ ಕುಮಾರಸ್ವಾಮಿಯವರೇ ಉತ್ತರ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಸಭೆ ಕರೆಯಲು ನಿರ್ಧಾರ ಮಾಡಿದ್ದಾರೆ. ನಾನು ನಿನ್ನೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಎಲ್ಲಾ ಹೋರಾಟಗಾರರನ್ನ ಮತ್ತು ಮಠಾಧೀಶರನ್ನು ಸಭೆಗೆ ಕರೆಯುತ್ತೇನೆ ಎಂದಿದ್ದಾರೆ.
ಸಭೆಗೆ ಎಲ್ಲಾ ಮಾಹಿತಿಗಳನ್ನ ತರಲಿ, ಉತ್ತರ ಕರ್ನಾಟಕಕ್ಕೆ ಏನಾದರೂ ನಾನು ಅನ್ಯಾಯ ಮಾಡಿದ್ದರೆ, ಅದನ್ನ ತಕ್ಷಣ ಸರಿ ಪಡಿಸಿಕೊಳ್ಳುತ್ತೇನೆ ಎಂದಿದ್ದಾರೆ ಎಂದು ಅವರು ತಿಳಿಸಿದರು.
ಹೋರಾಟ ಮಾಡುವವರು ಮತ್ತು ಸ್ವಾಮೀಜಿಗಳೇ ಸಮಯ ಹಾಗೂ ಸ್ಥಳ ನಿಗದಿ ಮಾಡಲಿ. ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ, ಅವರ ಜೊತೆ ಇವರು ಚರ್ಚಿಸಲಿ. ಚರ್ಚೆ ನಂತರ ನಮಗೆ ಅನ್ಯಾಯವಾದರೆ, ಆ ಅನ್ಯಾಯವನ್ನ ಹೇಗೆ ಸರಿಪಡಿಸಬೇಕು ಮತ್ತು ದೊರೆಯಬಹುದಾದ ಯೋಜನೆಗಳನ್ನು ನಮಗೆ ಬರುವಂತೆ ಒತ್ತಾಯ ಮಾಡಬೇಕು. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವುದು ಸರಿಯಲ್ಲ. ಇದರಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ ಎಂದರು.
ನಂಜುಂಡಪ್ಪ ವರದಿ ಬಂದ ನಂತರ ಉತ್ತರ ಕರ್ನಾಟಕದವರೇ ಅನೇಕರು ಮುಖ್ಯಮಂತ್ರಿ ಆಗಿದ್ದಾರೆ. ಆಗ ಏಕೆ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.
ಉತ್ತರ ಕರ್ನಾಟಕ ಹಿಂದುಳಿಯಲು ಜನಪ್ರತಿನಿಧಿಗಳೆ ಕಾರಣ. ನಾವು ಎಲ್ಲರೂ ಗಟ್ಟಿಯಾಗಿ ಉಳಿದಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ಪಕ್ಷಾತೀತವಾಗಿ ಒಂದಾಗಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಇದು ನನ್ನ ಅನಿಸಿಕೆ ಎಂದರು.
ಬಂದ್ ಮಾಡುವ ಮೊದಲು, ಅನ್ಯಾಯಗಳ ಬಗ್ಗೆ ಪಟ್ಟಿಗಳನ್ನು ಮಾಡಲಿ. ಪಾಟೀಲ್ ಪುಟ್ಟಪ್ಪನವರು ಅಖಂಡ ಕರ್ನಾಟಕ ಇರಬೇಕು ಎಂದು ಮಾತನಾಡಿದವರು. ಈಗ ಅನ್ಯಾಯವಾಗಿದ್ದರ ಬಗ್ಗೆ ಅವರು ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿದ್ದಾರೆ. ನಾನು ಅವರ ಜೊತೆ ಚರ್ಚೆ ಮಾಡುತ್ತೇನೆ. ಪುಟ್ಟಪ್ಪನವರು ರಾಜ್ಯವನ್ನ ವಿಂಗಡನೆ ಮಾಡುವ ಕೆಲಸ ಮಾಡುವುದಿಲ್ಲ ಎಂದರು.