ನವದೆಹಲಿ, ಜು. 28-ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ(ಪಿಎನ್ಬಿ) 12,700 ಕೋಟಿ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಕಂಟಕ ಎದುರಾಗುವ ಕಾಲ ಸನ್ನಿಹಿತವಾಗಿದೆ.
ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸುಮಾರು 9,000 ಕೋಟಿ ರೂ.ಗಳ ಸಾಲ ಎತ್ತುವಳಿ ಮಾಡಿ ಉದ್ದೇಶಿತ ಸುಸ್ತಿದಾರನಾಗಿ ಲಂಡನ್ಗೆ ಹಾರಿರುವ ಕಳಂಕಿತ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಇಂಗ್ಲೆಂಡ್ ಕಾನೂನು ಕುಣಿಕೆ ಬಿಗಿಗೊಳಿಸಿರುವಾಗಲೇ ಈ ಬೆಳವಣಿಗೆ ಕಂಡುಬಂದಿದೆ.
ನೀರವ್ ಮತ್ತು ಆತನ ನಾಲ್ವರು ಆಪ್ತರು ಅಮೆರಿಕದಲ್ಲೂ ಸಾಕಷ್ಟು ಆಸ್ತಿಪಾಸ್ತಿಗಳನ್ನು ಹೊಂದಿದ್ದು, ಅವರುಗಳನ್ನು ಜಪ್ತಿ ಮಾಡುವಂತೆ ಪಿಎನ್ಬಿ ಬ್ಯಾಂಕ್ ಕೋರಿಕೆ ಮೇರೆಗೆ ನ್ಯೂಯಾರ್ಕ್ನ ದಿವಾಳಿತನ ಪ್ರಕರಣಗಳ ನ್ಯಾಯಾಲಯವು ಆ ನಿಟ್ಟಿನಲ್ಲಿ ಈಗ ಕಾರ್ಯೋನ್ಮುಖವಾಗಿದೆ.
ನೀರವ್ ಮತ್ತು ಆತನ ಆಪ್ತರನ್ನು ಈ ಸಂಬಂಧ ವಿಚಾರಣೆಗೆ ಒಳಪಡಿಸಲು ಹಾಗೂ ಆಸ್ತಿಗಳ ತಪಾಸಣೆ ನಡೆಸಲು ಸಮನ್ಸ್ ಜಾರಿಗೊಳಿಸುವಂತೆ ನ್ಯಾಯಾಲಯವು ಸಂಬಂಧಪಟ್ಟವರಿಗೆ ಸೂಚನೆ ನೀಡಿದೆ. ಅಲ್ಲದೇ ಅಮೆರಿಕದಲ್ಲಿ ನೀರವ್ ಜೊತೆ ವ್ಯವಹಾರ ನಡೆಸಿದವರ ಬಗ್ಗೆ ಮಾಹಿತಿ ಇದ್ದಲ್ಲಿ ಅವುಗಳಿಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಒದಗಿಸಿದರೆ ಮುಂದಿನ ಕ್ರಮ ಕೈಗೊಳ್ಳಬಹುದು ಎಂದೂ ಅಮೆರಿಕ ನ್ಯಾಯಾಲಯ ಪಿಎನ್ಬಿಗೆ ತಿಳಿಸಿದೆ. ಇದರೊಂದಿಗೆ ನೀರವ್ಗೆ ವಿದೇಶದಲ್ಲೂ ಕಾನೂನು ಕಂಟಕ ಎದುರಾದಂತಾಗಿದೆ.
ಅಮೆರಿಕ ನ್ಯಾಯಾಲಯದ ಸೂಚನೆಯಿಂದ ಉತ್ತೇಜನಗೊಂಡಿರುವ ಭಾರತವು ಈ ನಿಟ್ಟಿನಲ್ಲಿ ಅಗತ್ಯ ದಾಖಲೆಗಳನ್ನು ಪೂರೈಸಲು ಸಜ್ಜಾಗಲಿದ್ದು, ನೀರವ್ ಮತ್ತು ಆಪ್ತರಿಗೆ ಹೊಸ ಕಂಟಕ ಎದುರಾಗಿದೆ.
ಈ ಮಧ್ಯೆ, ವಜ್ರ ವ್ಯಾಪಾರಿ ಮೆಹುಲ್ ಚೊಕ್ಸಿಗೆ ಅಂಟಿಗುವಾ ಮತ್ತು ಬರ್ಬುಡಾ ದೇಶದ ಪೌರತ್ವ ರದ್ದುಗೊಳಿಸಬೇಕೆಂಬ ಭಾರತದ ಮನವಿಗೆ ಓಗೊಟ್ಟಿರುವ ಕೆರೆಬಿಯನ್ ದೇಶ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿರುವುದು ಮತ್ತೊಂದು ಪೂರಕ ಬೆಳವಣಿಗೆಯಾಗಿದೆ.
ಅಂಟಿಗುವಾ ಪೌರತ್ವ ಪಡೆದಿರುವುದನ್ನು ಸಮರ್ಥಿಸಿಕೊಂಡಿರುವ ಚೊಕ್ಸಿ, ತಾವು ಕಾನೂನು ಬದ್ಧವಾಗಿಯೇ ಕಳೆದ ವರ್ಷ ಇಲ್ಲಿನ ರಾಷ್ಟ್ರೀಯತೆ ಪಡೆದಿದ್ದು, ವಾಣಿಜ್ಯ ವಹಿವಾಟು ವಿಸ್ತರಿಸುವ ಉದ್ದೇಶದಿಂದ ತಮಗೆ ಪೌರತ್ವ ನೀಡಲಾಗಿದೆ ಎಂದು ಹೇಳಿಕೊಂಡಿದ್ದನು.