
ನವದೆಹಲಿ,ಜು.28-ದೇಶದ ಸಣ್ಣ ಉದ್ಯಮಿಗಳಿಗೆ ಕೇಂದ್ರದ ಸಂಸತ್ ಸ್ಥಾಯಿ ಸಮಿತಿ ವರದಿಯೊಂದು ಶಾಕಿಂಗ್ ಸುದ್ದಿ ನೀಡಿದೆ. ಚೀನಾದಿಂದ ಅಪಾರ ಪ್ರಮಾಣದಲ್ಲಿ ಆಮದಾಗುತ್ತಿರುವ ವಸ್ತುಗಳನ್ನು ನಿಯಂತ್ರಿಸದಿದ್ದರೆ ದೇಶದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಶೀಘ್ರ ಮುಚ್ಚುವ ಸ್ಥಿತಿಗೆ ಬರಲಿದೆ ಎಂದು ಎಚ್ಚರಿಕೆ ನೀಡಿದೆ.
ಕಡಿಮೆ ದರದ ಚೀನಾದ ವಸ್ತುಗಳು ಸಮುದ್ರ ಮತ್ತು ಭೂ ಮಾರ್ಗದ ಮೂಲಕ ಸುಲಭವಾಗಿ ಭಾರತವನ್ನು ಪ್ರವೇಶಿಸುತ್ತಿವೆ. ಆಮದು ನೀತಿಗಳನ್ನು ಪರಿಷ್ಕರಣೆ ಮಾಡದ ಹಿನ್ನೆಲೆಯಲ್ಲಿ ಚೀನಾ ವಸ್ತುಗಳಿಗೆ ಭಾರತ ಡಂಪಿಂಗ್ ಗ್ರೌಂಡ್ ಆಗಿ ಪರಿವರ್ತನೆಗೊಂಡಿದೆ ಎಂದು ಸಮಿತಿ ಹೇಳಿದೆ. ದೇಶದ ಆರ್ಥಿಕತೆಗೆ ಹಿನ್ನೆಡೆ ಉಂಟುಮಾಡುತ್ತಿರುವ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ಸಂಸತ್ ಸ್ಥಾಯಿ ಸಮಿತಿ ಈ ವರದಿ ನೀಡಿದೆ.