ಬರಲಿದೆ ಕ್ರೈಂ ಥ್ರಿಲ್ಲರ್ ಆಕಾಶ ವರ್ಷ!

ಪರಭಾಷಾ ತಂತ್ರಜ್ಞರ ತಂಡವನ್ನೊಳಗೊಂಡಿರುವ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥಾ ಹಂದರದ ಕನ್ನಡ ಚಿತ್ರವೊಂದಕ್ಕೆ ಚಾಲನೆ ಸಿಕ್ಕಿದೆ. `ಆಕಾಶ ವರ್ಷ’ ಎಂಬ ಈ ಚಿತ್ರವನ್ನು ಜ್ಯುಡೇ ಮೂವೀಸ್ ಇಂಟರ್ ನ್ಯಾಷನಲ್ ಮತ್ತು ಬಿಪಿಆರ್ ಮೂವೀಸ್ ಇಂಟರ್ ನ್ಯಾಷನಲ್ ಸಹಯೋಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಬೆಂಗಳೂರು, ವಾರಣಾಸಿ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಯಲಿದೆ.

ವಿನ್ಸೆಂಟ್ ಜ್ಯುಡೇ ಮತ್ತು ರೆಚೋಸಿನ್ ಬಿಪಿ ನಿರ್ಮಾಣದಲ್ಲಿ ಮೂಡಿ ಬರಲಿರೋ ಆಕಾಶವರ್ಷ ಚಿತ್ರವನ್ನು ಗೋಮ್ಜ್ ಬಿ ನಿರ್ದೇಶನ ಮಾಡುತ್ತಿದ್ದಾರೆ. ಟಿ ವಿ ನಾಗೇಶ್ ರಾವ್ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಲಾರೆನ್ಸ್ ಸಜೆಸ್ಟಿನ್ ಮತ್ತು ಅರುನ್ ಆಂಟೊನಿ ಸಹ ನಿರ್ದೇಶನ ಇರಲಿದೆ. ಭುವನ್ ಮುತ್ತು ನೃತ್ಯ ನಿರ್ದೇಶನ, ಮೈಕೆಲ್ ಅಬ್ರಹಾಂ ಸಂಕಲನ, ವಿ ಶ್ರೀಕುಮಾರ್ ಸಂಗೀತ, ಜಾಕಿ ಜಾನ್ಸನ್ ಮತ್ತು ರಾಕಿ ರಾಜೇಶ್ ಸಾಹಸ, ಜಾಯ್ ಫ್ರಾನ್ಸಿಸ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ರಾಮ್ ಜನಾರ್ದನ್, ಎಡಿಸನ್, ಭುವನ್ ಮುತ್ತು, ಅನುಷಾ ನಾಯಕ್, ರಂಜನ್, ಶ್ರೇಯಾ, ರಾಕಿ ರಾಜೇಶ್ ಮತ್ತು ಗಿರೀಶ್ ಕಾರ್ನಾಡ್ ಅವರ ತಾರಾಗಣ ಈ ಚಿತ್ರದಲಿದೆ.

ಈ ಚಿತ್ರ ಕ್ಷಣ ಕ್ಷಣವೂ ಕುತೂಹಲ ಮೂಡಿಸುವಂಥಾ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನು ಹೊಂದಿದೆಯಂತೆ. ಸರ್ಕಲ್ ಇನ್ಸ್ ಪೆಕ್ಟರ್ ರಾಘುಗೆ ವರ್ಷಾ ಮೇಲೆ ಲವ್ವು. ಆಕೆಯನ್ನೇ ಮದುವೆಯಾಗಬೇಕೆಂಬುದು ಆತನ ಹಂಬಲ. ಆದರೆ ರಾಘು ಇದು ಕೈಗೂಡುವ ಕನಸು ಕಾಣುತ್ತಿರುವಾಗಲೇ ವರ್ಷಾಗೆ ಬ್ಯುಸಿನೆಸ್ ಮನ್ ಆಕಾಶ್ ಎಂಬಾತನ ಜೊತೆ ಮದುವೆಯಾಗುತ್ತದೆ. ಆದರೆ ಮದುವೆಯಾದ ತಿಂಗಳಲ್ಲಿಯೇ ವರ್ಷಾ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾಳೆ. ಬೇರೆ ದಾರಿ ಕಾಣದೆ ಆಕಾಶ್ ಪೊಲೀಸರಿಗೆ ದೂರು ನೀಡುತ್ತಾನೆ. ಆ ದೂರನ್ನು ರಿಸೀವ್ ಮಾಡಿಕೊಳ್ಳುವಾತ ವರ್ಷಾ ಮೇಲೆ ಮೋಹ ಹೊಂದಿದ್ದ ಸರ್ಕಲ್ ಇನ್ಸ್ ಪೆಕ್ಟರ್ ರಾಘು.

ತನ್ನ ಪ್ರೇಯಸಿಯನ್ನು ಮದುವೆಯಾಗಿದ್ದಾನೆಂಬ ಸಿಟ್ಟಿಗೆ ರಾಘು ಆಕಾಶನನ್ನೇ ಸಿಕ್ಕಿಸಲೂ ಯತ್ನಿಸುತ್ತಾನೆ. ಆದರೆ ವರ್ಷಾ ಏನಾದಳೆಂಬುದು ಮಾತ್ರ ಕಗ್ಗಂಟಾಗುಳಿಯುತ್ತೆ. ವರ್ಷಾ ಕಿಡ್ನಾಪ್ ಆಗಿದ್ದಾಳಾ, ಕೊಲೆಯಾಗಿದ್ದಾಳಾ, ಅದಕ್ಕೆ ಕಾರಣ ಯಾರು ಎಂಬುದರ ಸುತ್ತಾ ಒಂದರಕ್ಷಣವೂ ಕುತೂಹಲ ಮಾಸದಂತೆ ಈ ಚಿತ್ರ ಮೂಡಿ ಬರಲಿದೆಯಂತೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ