
ನವದೆಹಲಿ, ಜು.28-ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಗೋವಾ ಸರ್ಕಾರ ತೆಗೆದಿದ್ದ ಹೊಸ ತಗಾದೆಗೆ ಹಿನ್ನೆಡೆಯಾಗಿದೆ. ಮಹದಾಯಿ ನದಿ ದಿಕ್ಕು ಬದಲಿಸಿ ಮಲಪ್ರಭಾ ಜಲಾನಯನ ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕದ ವಿರುದ್ಧ ಗೋವಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಹದಾಯಿ ನದಿ ನೀರು ನ್ಯಾಯಾಧೀಕರಣ ತಿರಸ್ಕರಿಸಿದ್ದು, ಇದರಿಂದ ಕರಾವಳಿ ರಾಜ್ಯಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.
ಈ ಕುರಿತು ಗೋವಾ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಧೀಕರಣ ಅಂತರಾಜ್ಯ ಜಲ ಹಂಚಿಕೆ ವಿವಾದ ಕುರಿತು ಆಗಸ್ಟ್ನಲ್ಲಿ ಅಂತಿಮ ಐತೀರ್ಪು ಪ್ರಕಟಗೊಳ್ಳಲಿದೆ. ಈ ನಡುವೆ ಮಧ್ಯಂತರ ಅರ್ಜಿ ಸಲ್ಲಿಕೆಗೆ ಅವಕಾಶವಿಲ್ಲ. ಈ ವಿಷಯವನ್ನು ಈಗಾಗಲೇ ಹಿಂದೆ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿದೆ ಎಂಬ ಕಾರಣ ನೀಡಿ ಗೋವಾ ಮನವಿಯನ್ನು ತಿರಸ್ಕರಿಸಿದೆ. ಈ ಬಗ್ಗೆ ನ್ಯಾಯಾಧೀಕರಣವು ಗೋವಾ ಸರ್ಕಾರಕ್ಕೆ ಸ್ಪಷ್ಟ ಮೌಖಿಕ ಸೂಚನೆ ನೀಡಿದೆ.
ಐತೀರ್ಪು ತನ್ನ ವಿರುದ್ಧವಾಗಿ ಹೊರಬೀಳಬಹುದೆಂಬ ಆತಂಕದಿಂದ ಆದೇಶ ಮುಂದೂಡುವ ಉದ್ದೇಶದಿಂದ ಗೋವಾ ಮಧ್ಯಂತರ ಅರ್ಜಿ ಸಲ್ಲಿಸಿ ಈ ವಿವಾದವನ್ನು ಮತ್ತಷ್ಟು ಎಳೆಯುವ ಉದ್ದೇಶ ಹೊಂದಿತ್ತು ಎನ್ನಲಾಗಿದೆ.
ಈ ಸೂಚನೆಯಿಂದಾಗಿ ಈ ವಿವಾದದಲ್ಲಿ ಐತೀರ್ಪು ಘೋಷಣೆಯಾಗುವ ತನಕ ಕರ್ನಾಟಕ ನಿರಾಳವಾಗಲಿದೆ. ಆದಾಗ್ಯೂ, ತನ್ನ ಪಾಲಿನ ನೀರು ಪಡೆಯಲು ಕರ್ನಾಟಕ ಸಮರ್ಥ ಕಾನೂನು ಹೋರಾಟಕ್ಕೆ ಸಜ್ಜುಗೊಂಡಿದೆ.
ಗೋವಾ ಕ್ಯಾತೆ : ಗೋವಾದ ಉನ್ನತಾಧಿಕಾರಿಗಳ ತಂಡವೊಂದು ಜುಲೈ 23ರಂದು ಗಡಿ ಭಾಗದಲ್ಲಿರುವ ಮಲಪ್ರಭಾ ಜಲಾನಯನ ಪ್ರದೇಶದ ಕಣಕುಂಬಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕರ್ನಾಟಕವು ಅನಧಿಕೃತವಾಗಿ ಮಹದಾಯಿ ನದಿ ನೀರನ್ನು ಮಲಪ್ರಭಾ ಜಲಾನಯನ ಪ್ರದೇಶಕ್ಕೆ ತಿರುಗಿಸಿದೆ ಎಂದು ಆರೋಪಿಸಿತ್ತು. ಈ ವಿಷಯದಲ್ಲಿ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಮತ್ತೆ ಕ್ಯಾತೆ ತೆಗೆದಿದ್ದರು. ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿಯು ಆಗಸ್ಟ್ನಲ್ಲಿ ತನ್ನ ತೀರ್ಪು ನೀಡಲಿದೆ. ಆದರೆ, ಇದಕ್ಕೆ ಮುನ್ನವೇ ಕರ್ನಾಟಕವು ಕೈಗೊಂಡಿರುವ ಈ ಅನಧಿಕೃತ ಕ್ರಮವು ನ್ಯಾಯಮಂಡಳಿ ನಿಂದನೆಗೆ ಎಡೆಮಾಡಿಕೊಡುತ್ತದೆ ಎಂದು ಪಾಲೇಕರ್ ಆರೋಪಿಸಿದ್ದಾರೆ.
ಗೋವಾದಲ್ಲಿ ಮಾಂಡೋವಿ ಎಂದು ಕರೆಯಲ್ಪಡುವ ಮಹದಾಯಿ ನದಿ ನೀರು ಹಂಚಿಕೆ ಕುರಿತು ಜಲಪಾತ್ರದ ರಾಜ್ಯಗಳಾದ ಕರ್ನಾಟಕ ಮತ್ತು ಗೋವಾ ನಡುವೆ ದೀರ್ಘಕಾಲದಿಂದಲೂ ಸಂಘರ್ಷ ನಡೆಯುತ್ತಿದೆ. ಈಗ ಈ ವಿವಾದವು ಮಹದಾಯಿ ನದಿ ನೀರು ನ್ಯಾಯಮಂಡಳಿ ಮುಂದೆ ಇತ್ಯರ್ಥಕ್ಕೆ ಬಾಕಿ ಉಳಿದಿದೆ. ಆಗಸ್ಟ್ನಲ್ಲಿ ಅಂತಿಮ ಐತೀರ್ಪು ಹೊರಬೀಳಲಿದೆ.