
ಮೈಸೂರು, ಜು.27- ಎರಡನೇ ಆಷಾಢ ಶುಕ್ರವಾರವಾದ ಇಂದು ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಮಂದಿ ಭಕ್ತಾದಿಗಳು ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಆಷಾಢ ಶುಕ್ರವಾರದೊಂದಿಗೆ ಚಂದ್ರಗ್ರಹಣವೂ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬೆಟ್ಟಕ್ಕೆ ಆಗಮಿಸಿದ್ದರು. ಗ್ರಹಣ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಗೆ ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶ ನಿಷೇಧಿಸಲಾಗಿದೆ. ಹೀಗಾಗಿ ಇಂದು ಬೆಳಗ್ಗೆ 4 ಗಂಟೆಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿ ಆನಂತರ 5 ಗಂಟೆಗೆ ಭಕ್ತಾದಿಗಳಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಗ್ರಹಣದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 5 ಗಂಟೆಯಿಂದ ರಾತ್ರಿ 9ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ತದನಂತರ ದೇವಾಲಯಕ್ಕೆ ಪ್ರವೇಶ ವಿರುವುದಿಲ್ಲ ಎಂದು ದೇವಾಲಯದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದರು.
ಗ್ರಹಣ ಸಂದರ್ಭದಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಶನಿವಾರ ಬೆಳಗಿನ ಜಾವ ಪುಣ್ಯಾಹ ನೆರವೇರಿಸಿ ದೇವಾಲಯ ಶುದ್ಧಿಗೊಳಿಸಿದ ನಂತರವೇ ದೇವಿಗೆ ಪೂಜೆ ನೆರವೇರಿಸಲಾಗುತ್ತಿದ್ದು, ಪ್ರತಿ ದಿನ ಬೆಳಗ್ಗೆ 7 ಗಂಟೆಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದು, ಶನಿವಾರ ಮಾತ್ರ 8 ಗಂಟೆಯಿಂದ ದರ್ಶನಕ್ಕೆ ಅವಕಾಶವಿದೆ.