ಶ್ರೀರಾಮುಲು ರಾಜೀನಾಮೆಗೆ ಸಿದ್ಧವಾಗಲು ಕಾರಣವೇನು ಗೊತ್ತಾ?!

ಬಳ್ಳಾರಿ: ನನಗೆ ರಾಜಕೀಯ ಮುಖ್ಯ ಅಲ್ಲ, ನನ್ನ ಜನ ಮುಖ್ಯ. ನಾನೆಂದೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ. ಹಾಲಿ ಸಮ್ಮಿಶ್ರ ಸರ್ಕಾರದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಯೋಜನೆಗಳ ಅನುಷ್ಠಾನ, ಅನುದಾನ ನೀಡಿಕೆಯಲ್ಲಿ ಅನ್ಯಾಯವನ್ನು ಮುಂದುವರಿಸಿದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಲು ಮುಂದಾಳತ್ವ ವಹಿಸಿಕೊಳ್ಳುವುದಾಗಿ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ.

ಅವರಿಂದು ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ, ಸಾಲ ಮನ್ನಾ ಮತ್ತು ಮಹಾದಾಯಿ ಹೋರಾಟಗಾರರ ವಿಷಯದಲ್ಲಿ ಉತ್ತರ ಕರ್ನಾಟಕ ಭಾಗದ ರೈತರಿಗೆ ಮುಖ್ಯಮಂತ್ರಿ ಅಗೌರವದಿಂದ ಮಾತನಾಡುವುದನ್ನು ನಾನು ಸಹಿಸಲಾರೆ. ಆಂಧ್ರ ಪ್ರದೇಶದಲ್ಲಿ ತೆಲಂಗಾಣಕ್ಕಾಗಿ ನಡೆದ ಹೋರಾಟವನ್ನು ಸ್ಮರಿಸಿದ ಅವರು, ಅಂತಹ ಹೋರಾಟಕ್ಕೆ ನಾವೂ ಸಿದ್ಧ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ನಡೆಸುವವರಿಗೂ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದರು.
ಪತ್ರಕರ್ತರನ್ನು ವಿಧಾನಸೌಧದ ಬಳಿ ನಿಯಂತ್ರಿಸುವ ಮೂಲಕ ಸಿಎಂ ಹಿಟ್ಲರ್ ರೀತಿಯಲ್ಲಿ ಆಡಳಿತ ನಡೆಸಲು ಮುಂದಾಗಿದ್ದಾರೆ. ಉತ್ತಮ ಆಡಳಿತ ನಡೆಸುವೆ ಎಂದು ಹೇಳುವ ಕುಮಾರಸ್ವಾಮಿಯವರು ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಕಳೆದರೂ ಇನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿಲ್ಲ ಎಂದು ಕುಟುಕಿದರು.
ರಾಜ್ಯ ಒಡೆಯಲು ಸನ್ನದ್ಧರಾಗಿದ್ದಿರಾ ಎಂದು ಕೇಳಿದ್ದಕ್ಕೆ, ಅಖಂಡ ಕರ್ನಾಟಕವಾಗಿರಬೇಕೆಂಬುದೇ ನನ್ನ ಹಂಬಲ. ಆದರೆ, ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ನಾನೇಕೆ ಸುಮ್ಮನೆ ಕುಳಿತುಕೊಳ್ಳಲಿ ಎಂದು ರಾಮುಲು ಪ್ರಶ್ನಿಸಿದರು.
ಸಿಎಂ ಕುಮಾರಸ್ವಾಮಿ ಮತ್ತು ಅವರ ಸಹೋದರ, ಸಚಿವ ರೇವಣ್ಣ ಹಾಸನ, ಮಂಡ್ಯ, ರಾಮನಗರ ಬಿಟ್ಟು ಬೇರೆ ಜಿಲ್ಲೆಗಳಿಗೆ ಹೋಗುತ್ತಿಲ್ಲ. ಕರಾವಳಿಯಲ್ಲಿ ನೆರೆ ಬಂದರೂ ಅಲ್ಲಿಗೆ ಹೋಗಲಿಲ್ಲ. ಕೃಷ್ಣ ನದಿ ಉಕ್ಕಿ ಹರಿದರೂ ಇತ್ತ ಬರಲಿಲ್ಲ. ಬೆಳಗಾವಿಯಲ್ಲಿದ್ದ ಕೆಶಿಪ್ ಎನ್ನುವ ಸಂಸ್ಥೆಯನ್ನು ಹಾಸನಕ್ಕೆ ವರ್ಗ ಮಾಡಿಸಿಕೊಂಡಿದ್ದಾರೆ. ಇದರ ಅವಶ್ಯಕತೆ ಇತ್ತೆ ಎಂದು ಪ್ರಶ್ನಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ