ಮೈಸೂರು, ಜು.27-ರಾಜ್ಯ ವಿಭಜನೆ ಬಗ್ಗೆ ನಮ್ಮ ವಿರೋಧಿವಿದೆ. ಯಾವುದೇ ಕಾರಣಕ್ಕೂ ಕರ್ನಾಟಕ ವಿಭಜನೆಯಾಗಬಾರದು, ಉತ್ತರ ಕರ್ನಾಟಕ ಬೇಡಿಕೆ ಖಂಡಿತಾ ಸರಿಯಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಎರಡನೆ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಇಂದು ಬೆಳಗ್ಗೆ ಮೆಟ್ಟಿಲುಗಳಿಗೆ ಪೂಜೆ ಸಲ್ಲಿಸಿ ಬರಿಗಾಲಿನಲ್ಲಿ ಬೆಟ್ಟವನ್ನು ಏರಿ ದೇವಿ ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶ ಎರಡು ಹೋಳಾಗಿ ಈಗ ಬಹಳಷ್ಟು ತೊಂದರೆ ಅನುಭವಿಸುತ್ತಿವೆ. ಹಿಂದುಳಿದ ರಾಜ್ಯಗಳಾಗಿಬಿಟ್ಟಿವೆ. ಆ ರೀತಿ ಪರಿಸ್ಥಿತಿ ನಮ್ಮಲ್ಲಿ ಉದ್ಭವವಾಗಬಾರದು. ಅಖಂಡ ಕರ್ನಾಟಕವಾಗಿಯೇ ನಮ್ಮ ರಾಜ್ಯ ಉಳಿಯಬೇಕು ಎಂದು ತಿಳಿಸಿದರು.
ರೈತರ ಸಾಲ ಸಂಪೂರ್ಣ ಮನ್ನಾ ಆಗಿಲ್ಲ ಎಂದು ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ರೈತರ ಸಾಲ ಮನ್ನಾ ಬಗ್ಗೆ ಈಗಲೂ ಗೊಂದಲ ಇರುವುದರಿಂದ ರೈತರ ಆತ್ಮಹತ್ಯೆ ಮುಂದುವರೆದಿದೆ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಇಡೀ ಕರ್ನಾಟಕಕ್ಕೆ ಮುಖ್ಯಮಂತ್ರಿ. ಕೇವಲ ಹಳೇ ಮೈಸೂರು ಅಭಿವೃದ್ಧಿ ಬಗ್ಗೆ ಯೋಚಿಸುತ್ತಾರೆ. ಬಜೆಟ್ನಲ್ಲಿ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿದ್ದಾರೆ ಎಂದು ಅವರು ದೂರಿದರು. ಉತ್ತರ ಕರ್ನಾಟಕದ ಜನತೆಯ ಜತೆ ಸದಾ ಬಿಜೆಪಿ ಇರುತ್ತದೆ ಎಂದು ಹೇಳಿದ ಅವರು, ನದಿ ನೀರಿನ ಹಂಚಿಕೆಯಲ್ಲಿ ನಮಗೆ ನ್ಯಾಯ ಸಿಗಬೇಕಾದರೆ ಇಡೀ ರಾಜ್ಯದ ಜನ ಒಗ್ಗಟ್ಟಾಗಿರಬೇಕು. ಅದುಬಿಟ್ಟು ಪ್ರತ್ಯೇಕತೆಯ ಮಾತನಾಡುವುದು ಸರಿಯಲ್ಲ ಎಂದರು.