ಕುಣಿಗಲ್, ಜು.27- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಬಂಧ ಕುಣಿಗಲ್ ಮೂಲದ ವ್ಯಕ್ತಿಯನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದು, ಆರೋಪಿಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಕುಣಿಗಲ್ ಪಟ್ಟಣದ ಸುರೇಶ್ ಎಂಬಾತ ಆರೋಪಿಗಳಿಗೆ ಆಶ್ರಯ ನೀಡಿದ್ದನೆಂಬ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ. ಸ್ವಗ್ರಾಮ ಕುಣಿಗಲ್ನ ಕಸಬಾ ಹೋಬಳಿ ಹೇರೂರಿನಲ್ಲಿ ಪ್ರೌಢಶಾಲೆ ಮುಗಿಸಿ ಕುಣಿಗಲ್ನಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಂತರ ತುಮಕೂರಿನ ಸಿದ್ದಾರ್ಥ ಕಾಲೇಜಿನಲ್ಲಿ ಬಿಇ ಪದವಿ ವ್ಯಾಸಂಗ ಮಾಡುತ್ತಿದ್ದಾಗಲೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಗೋವಾ ಮೂಲದ ಧಾರ್ಮಿಕ ಸಂಘಟನೆಯೊಂದಕ್ಕೆ ಸೇರಿಕೊಂಡು ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ ಕಾಳೆ, ಮೋಹನ್ ನಾಯಕನ ಜತೆ ಸಂಪರ್ಕ ಹೊಂದಿದ್ದ.
ಬೆಂಗಳೂರಿನ ಸೀಗೇಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದ ಈತ ಆರೋಪಿಗಳಿಗೆ ಇಲ್ಲಿ ಆಶ್ರಯ ನೀಡಿದ್ದಲ್ಲದೆ ತನ್ನ ಬೈಕನ್ನು ಸಹ ಗೌರಿ ಹತ್ಯೆ ಹಂತಕರಿಗೆ ನೀಡುವ ಮೂಲಕ ಸಹಾಯ ಮಾಡಿದ್ದನು ಎಂಬ ಆರೋಪ ಕೇಳಿ ಬಂದಿದೆ. ಗೌರಿ ಹತ್ಯೆ ನಡೆದ ಸಂದರ್ಭದಲ್ಲಿ ತನಿಖೆ ಕೈಗೊಂಡಿದ್ದ ಎಸ್ಐಟಿ ಪೆÇಲೀಸರು ಈತನ ಚಲನವಲನ ಗಮನಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಿದ್ದರು.
ಆದರೆ ಈತ ಆರೋಪಿಗಳ ಜತೆ ದೂರವಾಣಿ ಸಂಪರ್ಕ ಹೊಂದಿದ್ದ. ಈತನ ಮೇಲೆ ನಿಗಾ ಇಟ್ಟಿದ್ದ ಎಸ್ಐಟಿ ಪೆÇಲೀಸರು ನಿನ್ನೆ ಸಂಜೆ ಈತನ ಮನೆ ಮೇಲೆ ದಾಳಿ ಮಾಡಿ ಬಂಧಿಸುವ ಮೂಲಕ ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಸಂಖ್ಯೆ 11ಕ್ಕೆ ಏರಿದಂತಾಗಿದೆ.