ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ

ಜೊಹಾನ್ಸ್‌ಬರ್ಗ್‌:ಜು-27: ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಭೇಟಿಯಾಗಿದ್ದಾರೆ.

10ನೇ ಬ್ರಿಕ್ಸ್ ಶೃಂಗಸಭೆಗೆ ದಕ್ಷಿಣ ಆಫ್ರಿಕಾಗೆ ತೆರಳಿರುವ ಪ್ರಧಾನಿ ಮೋದಿ, ಕಳೆದ 4 ತಿಂಗಳಲ್ಲಿ ಮೂರನೇ ಬಾರಿ ಜಿನ್‌ಪಿಂಗ್‌ರನ್ನು ಭೇಟಿ ಮಾಡಿದ್ದಾರೆ.

ಭಾರತ – ಚೀನಾ ನಡುವೆ ಅಭಿವೃದ್ಧಿಯ ಪಾಲುದಾರಿಕೆ ಮತ್ತಷ್ಟು ಹತ್ತಿರವಾಗಲು ಈ ಭೇಟಿ ಮತ್ತೊಂದು ಅವಕಾಶ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ವಿಚಾರ, ಬ್ರಿಕ್ಸ್ ಸಹಕಾರ ಹಾಗೂ ಇತರೆ ಪರಸ್ಪರ ಹಿತಾಸಕ್ತಿಯ ವಿಚಾರಗಳ ಬಗ್ಗೆ ಉಭಯ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಏಪ್ರಿಲ್‌ನಲ್ಲಿ ಮೋದಿ ಹಾಗೂ ಜಿನ್‌ಪಿಂಗ್ ಚೀನಾದ ವುಹಾನ್‌ ನಗರದಲ್ಲಿ 2 ದಿನಗಳ ಕಾಲ ನಡೆದ ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ನಂತರ, ಜೂನ್‌ನಲ್ಲಿ ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟ ಶೃಂಗಸಭೆಯಲ್ಲೂ ಸಹ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಮಾತುಕತೆ ನಡೆಸಿದ್ದರು.

ಇನ್ನು, ಜಿನ್‌ಪಿಂಗ್ ಜತೆಗಿನ ಇತ್ತೀಚಿನ ಭೇಟಿಗಳಿಂದ ಭಾರತ – ಚೀನಾ ನಡುವಣ ಸಂಬಂಧಕ್ಕೆ ಮತ್ತಷ್ಟು ಬಲ ಬಂದಿದೆ ಹಾಗೂ ಉಭಯ ದೇಶಗಳ ನಡುವಿನ ಸಹಕಾರಕ್ಕೆ ಹೊಸ ಅವಕಾಶಗಳು ದೊರೆತಿವೆ ಎಂದು ಸಹ ಮೋದಿ ಹಿಂದಿನ ಭೇಟಿಗಳನ್ನ ನೆನಪಿಸಿಕೊಂಡಿದ್ದಾರೆ.ಅಲ್ಲದೇ ಉಭಯ ದೇಶಗಳು ಈ ಸಂಬಂಧವನ್ನು ಹೀಗೆ ಮುಂದುವರಿಸಿಕೊಂಡು ಹೋಗುವುದು ಬಹಳ ಮುಖ್ಯ ಎಂದು ಮೋದಿ ಹೇಳಿದ್ದಾರೆ.

ಡೋಕ್ಲಾಮ್ ರೀತಿಯ ಸನ್ನಿವೇಶಗಳು ಭವಿಷ್ಯದಲ್ಲಿ ಬರದಂತೆ ತಡೆಯಲು ಮೋದಿ ಹಾಗೂ ಜಿನ್‌ಪಿಂಗ್ ವುಹಾನ್ ನಗರದಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ, ಎರಡೂ ದೇಶಗಳ ಸೇನೆಯ ನಡುವೆ ಮಾತುಕತೆ ಬಲಪಡಿಸಲು ಚರ್ಚೆ ನಡೆಸಿದ್ದರು.

BRICS Meet,PM Modi and Xi Jinping,Discuss India-China Relationship

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ