ಹುಬ್ಬಳ್ಳಿ;ಏನೇನೋ ಸಾಧಿಸಿದ್ದೇವೆ ಅಂತ ಹೇಳ್ತಿದ್ದೇವೆ. ಆದ್ರೇ, ನಮ್ಮ ಸಾಧನೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅದರಿಂದ ಎಷ್ಟು ಪ್ರಯೋಜನವಾಗಿದೆ ಅನ್ನೋದ್ ಮಾತ್ರ ಪ್ರಶ್ನಾರ್ಥಕ. ತಮ್ಮ ನ್ಯಾಯ ಸಮ್ಮತ ಹಕ್ಕಿಗಾಗಿ ತಾವ್ ದುಡಿದ್ ದುಡ್ಡು ಪಡೆಯೋದಕ್ಕಾಗಿ ಜನ ಇನ್ನೂ ಎಂಥೆಂತ ಪ್ರತಿಭಟನೆ ಮಾಡ್ಬೇಕಾಗಿದೆ. ಹುಬ್ಬಳ್ಳಿಯಲ್ಲಿ ಗುತ್ತಿಗೆ ಪೌರ ಕಾರ್ಮಿಕರು ತಮ್ಮ ವೇತನಕ್ಕಾಗಿ ಮಲವನ್ನೇ ಮೈಮೇಲೆ ಸುರಿದುಕೊಂಡಿದಾರೆ.
ಮಲವನ್ನೇ ಈ ಜನ ತಮ್ ಮೈಮೇಲೆ ಸುರಿದುಕೊಂಡಿದಾರೆ. ಇದು ಸಮಾಜ ತಲೆತಗ್ಗಿಸುವಂತದ್ದಲ್ವೇ..ಜನರಿಗೆ ಅಸಹ್ಯ ಅನ್ನಿಸೋ ಇಂಥ ಒಂದ್ ಸ್ಥಿತಿಗೆ ಇವರು ತಲುಪಿದಾರಂದ್ರೇ, ಇವರು ಅನುಭವಿಸ್ತಿರೋ ನೋವು ಹೇಗಿದೆ ಅಂತ ಅರ್ಥವಾಗದೇ ಇರಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆವರಣದಲ್ಲೇ ಇಂಥದೊಂದ್ ಆಘಾತಕಾರಿ ಪ್ರತಿಭಟನೆ ನಡೆದ್ಹೋಗಿದೆ. ಸಿಟಿಯಲ್ಲಿರೋ ಎಲ್ಲ ಕಲ್ಮಷ, ಕೊಳೆ, ಹೊಲಸನ್ನ ಕ್ಲೀನ್ ಮಾಡಿ ಸ್ವಚ್ಛಗೊಳಿಸೋ ಮಂದಿ ಇವ್ರು. ಆದ್ರೇ, ಜನ ಓಡಾಡೋಕೆ, ಜನರ ಆರೋಗ್ಯ ಕಾಪಾಡೋಕೆ ಅಂದವನ್ನ ಹೆಚ್ಚಿಸೋದಕ್ಕೆ ಇವರೆಲ್ಲ ನಿತ್ಯ ದುಡೀತಿದಾರೆ. ಆದ್ರೇ, ಇವರು ಹೀಗೆ ದುಡಿದ್ರೂ ಕಳೆದ ನಾಲ್ಕು ತಿಂಗಳಿನಿಂದ ಅವಳಿನಗರದ 1300ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ವೇತನ ಪಾವತಿಯಾಗ್ತಿಲ್ಲ. ನಾಲ್ಕು ತಿಂಗಳಿನಿಂದ ಬಾಕಿಯಿದ್ದ ವೇತನವನ್ನ ನೇರ ಪಾವತಿ ಮಾಡ್ಬೇಕು ಅಂತ ಹೈಕೋರ್ಟ್ ಆದೇಶ ನೀಡಿದೆ. ಇಷ್ಟಿದ್ರೂ ಪೌರ ಕಾರ್ಮಿಕರಿಗೆ ವೇತನ ಪಾವತಿ ಮಾಡ್ತಿಲ್ಲ. ಇದರಿಂದಲೇ ಬದುಕು ನಡೆಸ್ತಿರೋ ಬಡ ಕುಟುಂಬಗಳು ಎಷ್ಟೇ ಮನವಿ, ಪ್ರತಿಭಟನೆಗೂ ಜಗ್ಗದಾದಾಗ ಈಗ ಮಲವನ್ನ ಮೈಮೇಲೆ ಸುರಿದುಕೊಂಡು ಪ್ರತಿಭಟನೆ ನಡೆಸಿದ್ರು.
ಹೈಕೋರ್ಟ್ ಸೂಚನೆೆಯಂತೆ ನೇರ ವೇತನ ಪಾವತಿ ಮಾಡಲು ಮಹಾನಗರ ಪಾಲಿಕೆ ಒಪ್ಪಿಕೊಂಡಿದೆ. ಡಿಸಿ ಕೂಡ ಹೈಕೋರ್ಟ್ ಆದೇಶ ಪಾಲಿಸುವಂತೆ ಸೂಚನೆ ನೀಡಿದಾರೆ. ಪಾಲಿಕೆ ಸಾಮಾನ್ಯ ಸಭೆಯಲ್ಲೂ ಗುತ್ತಿಗೆ ಬದಲು ನೇರ ವೇತನ ಪಾವತಿ ಮಾಡೋದಕ್ಕೆ ಠರಾವು ಕೂಡ ಪಾಸ್ ಆಗಿದೆ. ಇಷ್ಟಿದ್ರೂ ಈಗ ಪಾಲಿಕೆಯ ಪೌರ ಕಾರ್ಮಿಕರಿಗೆ ವೇತನ ಪಾವತಿಯಾಗ್ತಿಲ್ಲ. ಇದರ ಮಧ್ಯೆಯೇ ಕೆಲ ಕಡೆಗೆ ಗುತ್ತಿಗೆ ನೌಕರರನ್ನ ಹೇಳದೇ ಕೇಳದೇ ಕಿತ್ಹಾಕಲಾಗ್ತಿದೆ. ಜತೆಗೆ ನಕಲಿ ಪೌರ ಕಾರ್ಮಿಕರ ಹಾವಳಿ ಕೂಡ ಹೆಚ್ಚಿದೆ ಅನ್ನೋ ಆಕ್ರೋಶವೂ ಇದೆ. ಇದೇ ಕಾರಣಕ್ಕೆ ತಮ್ಮ ನ್ಯಾಯ ಸಮ್ಮತ ಬೇಡಿಕೆ ಈಡೇರಿಸೋದಕ್ಕೆ ಆಗ್ರಹಿಸಿ ಕಳೆದೊಂದು ವಾರದಿಂದ ಪೌರ ಕಾರ್ಮಿಕರು ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸ್ತಿದಾರೆ. ಇವತ್ತು ಪೊಲೀಸರನ್ನ ಕರೆಯಿಸಿ ಪ್ರತಿಭಟನೆ ಹತ್ತಿಕ್ಕಲು ಸಹ ಮುಂಗಾಗಿದ್ರಂತೆ. ಇದರಿಂದ ಕೆರಳಿದ ಪೌರ ಕಾರ್ಮಿಕರು ಇವತ್ತು ಮಲ ಮೈಮೇಲೆ ಸುರಿದುಕೊಂಡ್ರು. ಇದಾದ್ಮೇಲೆ ಪೊಲೀಸರು ಪ್ರತಿಭಟನೆ ನಡೆಸಿದ ನೂರಾರು ಪೌರ ಕಾರ್ಮಿಕರನ್ನ ಬಂಧಿಸಿದರು.
ತಾವ್ ದುಡಿದಿದ್ರೂ ವೇತನ ಪಡೆಯೋದಕ್ಕಾಗಿ ಪೌರ ಕಾರ್ಮಿಕರು ಇಂಥ ಹೋರಾಟಕ್ಕಿಳಿಯಬೇಕಾಗಿದೆ. ನಾಗರಿಕ ಸಮಾಜ ನಿಜಕ್ಕೂ ತಲೆದಗ್ಗಿಸಬೇಕಲ್ವೇ..