ಬೆಂಗಳೂರು, ಜು.27-ತೀವ್ರ ಕುತೂಹಲ ಕೆರಳಿಸಿರುವ ಉದ್ಯಾನನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್ಟಿಟ್ಯೂಟ್ನ ಲಾಕರ್ ಪ್ರಕರಣದಲ್ಲಿ ಅಗೆದಷ್ಟು ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ.
ಈ ಪ್ರಕರಣದಲ್ಲಿ ಸಚಿವರ ಆಪ್ತರೆನ್ನಲಾದ ವ್ಯಕ್ತಿಯನ್ನು ಪತ್ತೆ ಮಾಡಲು ಇದೀಗ ಆದಾಯ ತೆರಿಗೆ ಅಧಿಕಾರಿಗಳು ಬೌರಿಂಗ್ ಇನ್ಸ್ಟಿಟ್ಯುಟ್ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ತೊಡಗಿದೆ.
ಸಚಿವರ ಆಪ್ತರೆನ್ನಲಾದ ಒಬ್ಬರು ಬೌರಿಂಗ್ ಸಂಸ್ಥೆಯ ಕಾರ್ಯದರ್ಶಿಯವರ ಕಚೇರಿಗೆ ತೆರಳಿ ಕೆಲವು ಕಾಗದಪತ್ರಗಳು ಮತ್ತು ದಸ್ತಾವೇಜುಗಳನ್ನು ನೀಡುವಂತೆ ಕೋರಿದ್ದರು. ಆದರೆ ತಮ್ಮ ಗುರುತು ಪತ್ತೆಯಾಗುತ್ತದೆ ಎಂಬ ಕಾರಣಕ್ಕಾಗಿ ಅಲ್ಲಿಂದ ಅವರು ಜಾರಿಕೊಂಡಿದ್ದರು.
ಈಗ ಆ ವ್ಯಕ್ತಿ ಯಾರು ? ಅವರು ಎಲ್ಲಿಂದ ಬಂದರು ? ಯಾವ ಸಚಿವರ ಪರವಾಗಿ ಅವರು ಅಲ್ಲಿಗೆ ತೆರಳಿದ್ದರು ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಲು ಐಟಿ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.