ಮುಂಬೈ, ಜು.26-ದೇಶದ ವಾಣಿಜ್ಯ ನಗರಿ ಮುಂಬೈನ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಆರಂಭಿಕ ವಹಿವಾಟಿನಲ್ಲಿ ಇದೇ ಪ್ರಥಮ ಬಾರಿಗೆ ಸರ್ವಕಾಲಿಕ ದಾಖಲೆಯ 37,000 ಅಂಕಗಳ ಮಟ್ಟವನ್ನು ದಾಟಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕವೂ ಸಹ 11,172.40 ಅಂಕಗಳ ಹೊಸ ಎತ್ತರ ತಲುಪಿದ್ದು, ಇದೂ ಕೂಡ ಹೊಸ ದಾಖಲೆಯಾಗಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಬಂಡವಾಳ ಸರಕು, ಕ್ಷಿಪ್ರ ಮಾರಾಟದ ಗ್ರಾಹಕರ ವಸ್ತುಗಳು, ಆಸ್ತಿ ಮತ್ತು ಬ್ಯಾಂಕ್ ಷೇರುಗಳ ಭರ್ಜರಿ ಖರೀದಿ ಹಿನ್ನೆಲೆಯಲ್ಲಿ ಷೇರು ಪೇಟೆ ಇಂದು ಹೊಸ ಎತ್ತರ ತಲುಪಿತು.
ಬೆಳಗ್ಗೆ 11 ಗಂಟೆ ವೇಳೆಗೆ ಸೆನ್ಸೆಕ್ಸ್ 140.46 ಅಂಕಗಳ ಮುನ್ನಡೆ ಕಾಯ್ದುಕೊಂಡು 36,998.69 ಅಂಕಗಳ ಮಟ್ಟದಲ್ಲೂ, ನಿಫ್ಟಿ 40.40 ಅಂಕಗಳ ಮುನ್ನಡೆಯೊಂದಿಗೆ 11,172.40 ಅಂಕಗಳ ಎತ್ತರದಲ್ಲೂ ವಹಿವಾಟು ನಡೆಸಿದವು.