ಬೆಂಗಳೂರು: ಪ್ರತಿಪಕ್ಷದಿಂದ ಟೀಕೆ-ಆರೋಪ, ಹಲವು ರೀತಿಯ ಮಾತಿನ ವಿವಾದಗಳು, ರೈತರ ಸಾಲಮನ್ನಾ ವಿಚಾರ, ಸಿಎಂ ಕಣ್ಣೀರಧಾರೆ, ಖಾತೆ ಹಂಚಿಕೆ, ಸಚಿವಗಿರಿ ಪಟ್ಟಕ್ಕಾಗಿ ಬೆಂಬಿಡದ ನಾಯಕರ ದಂಡು…ಇವೆಲ್ಲದರ ನಡುವೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಅರವತ್ತು ದಿನ ಪೂರ್ಣಗೊಳಿಸಿದೆ…
ವಿಧಾನಸೌಧದ ಎದುರು ಮೇ 23 ರಂದು ರಾಷ್ಟ್ರ ಹಾಗೂ ರಾಜ್ಯದ ಘಟಾನುಘಟಿ ನಾಯಕರು ಮತ್ತು ವಿವಿಧ ರಾಜ್ಯಗಳ ಸಿಎಂಗಳು, ಪ್ರಾದೇಶಿಕ ಪಕ್ಷಗಳ ನಾಯಕರ ಸಮ್ಮುಖದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಕಡಿಮೆ ಸ್ಥಾನಗಳನ್ನು ಪಡೆದಿದ್ದರೂ ಸಿಎಂ ಗಾದಿಗೇರುವ ಮೂಲಕ ಹೆಚ್ಡಿಕೆ ದೇಶದ ಗಮನವನ್ನು ಸೆಳೆದರು.
ಮೋದಿ ಸರ್ಕಾರದ ವಿರುದ್ಧ ವೇದಿಕೆಯೊಂದನ್ನು ರೂಪಿಸುವ ಮರ್ಜಿಗೆ ಸಿಲುಕಿದ ಕಾಂಗ್ರೆಸ್ ಪಕ್ಷವು, ಜೆಡಿಎಸ್ಗೆ ನೀಡಿದ ‘ಬೇಷರತ್’ ಬೆಂಬಲದ ನಡುವೆಯೇ ಈ ಎರಡು ತಿಂಗಳಲ್ಲಿ ರಾಜ್ಯ ರಾಜಕಾರಣ ಸಾಕಷ್ಟು ಏರಿಳಿತ ಉಂಟಾಗಿದೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ‘ನಾನೇನೂ ಆರೂವರೆ ಕೋಟಿ ಕನ್ನಡಿಗರ ಮರ್ಜಿಯಲ್ಲಿಲ್ಲ’ ಹೇಳಿಕೆ ಇನ್ನೂ ಅನೇಕರ ಬಾಯಲ್ಲಿ ಗುನುಗುಡುತ್ತಿದೆ. ಸರ್ಕಾರದಲ್ಲಿರುವ ಭ್ರಷ್ಟರು ಸಿಎಂ ಕುರ್ಚಿಯನ್ನೂ ಅಲುಗಾಡಿಸುತ್ತಾರೆ ಎಂಬ ಮಾತು ಚರ್ಚೆಗೀಡಾಯಿತು. ಸರ್ಕಾರದಲ್ಲಿನ ವಿಷವನ್ನು ನುಂಗುತ್ತಾ ವಿಷಕಂಠನಾಗಿದ್ದೇನೆ, ಮುಳ್ಳಿನ ಹಾಸಿಗೆಯಲ್ಲಿದ್ದೇನೆ ಎಂಬ ಮಾತಂತೂ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಜೊತೆಗೆ ಈ ಎಲ್ಲಾ ಘಟನೆಗಳು ಚರ್ಚೆಗೆ ಗ್ರಾಸವಾಯಿತು.
ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರೋಧಿ ವೇದಿಕೆ ನಿರ್ವಿುಸಬೇಕೆಂದು ಜೆಡಿಎಸ್ ಎದುರು ಮಂಡಿಯೂರಿದ್ದ ಕಾಂಗ್ರೆಸ್ ನಿರೀಕ್ಷೆ ಇನ್ನೂ ಕೈಗೂಡಿಲ್ಲ ಎನ್ನುವ ಮಾತುಗಳು ಕೇಳೀಬರುತ್ತಿವೆ. ಕಾಂಗ್ರೆಸ್ನ ರಾಷ್ಟ್ರೀಯ ನಾಯಕರ ಅನಿವಾರ್ಯತೆ ರಾಜ್ಯ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದ ಕಾರಣ ಮೈತ್ರಿ ಬಗ್ಗೆ ಅನೇಕರು ಅಪಸ್ವರ ಎತ್ತುತ್ತಲೇ ಇದ್ದಾರೆ. ಸರ್ಕಾರ ರಚನೆಯಾಗಿ 15 ದಿನಗಳ ನಂತರ ಸಂಪುಟ ರಚನೆ ಇನ್ನೂ ಆಗದೆ, ಜಿಲ್ಲಾ ಉಸ್ತುವಾರಿಗಳ ನೇಮಕ, ಮುಂದುವರೆದ ಸಚಿವ ಸಂಪುಟ ವಿಸ್ತರಣೆ, ನಿಗಮ- ಮಂಡಳಿ ಆಯ್ಕೆ ಕಸರತ್ತು ಇನ್ನೂ ಕಗ್ಗಂಟಾಗಿಯೇ ಪರಿಣಮಿಸಿದೆ.
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿಕೆ, ಸಾಲಮನ್ನಾದ ಗೊಂದಲ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗುತ್ತಲೇ ಇವೆ. ಇನ್ನು ಜಿ.ಟಿ. ದೇವೇಗೌಡರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ, ವಿಧಾನ ಪರಿಷತ್ನ ಒಬ್ಬರೇ ಸದಸ್ಯರಿಗೆ ಸಚಿವ ಸ್ಥಾನ, ಜಯಮಾಲಾ ಸೇವೆಯೇ ಇಷ್ಟವಾಗಿರಬಹುದೆಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ, ವಕ್ಫ್ ಆಸ್ತಿ ವಿವಾದದಲ್ಲಿ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿರುವ ಸಚಿವ ಜಮೀರ್ ಅಹಮದ್ ಖಾನ್, ಇತ್ತೀಚೆಗೆ ದೆಹಲಿಯಲ್ಲಿ ರಾಜ್ಯ ಸಂಸದರಿಗೆ ನೀಡಿದ ಐ-ಫೋನ್ ಗಿಫ್ಟ್ ಭಾರಿ ಸದ್ದು ಮಾಡಿತು.
ಸರ್ಕಾರಕ್ಕೆ ಮುಂಬರುವ ದಿನಗಳು ಹೂವಿನ ಹಾದಿಯಾಗಿರುವುದೋ, ಮುಳ್ಳಿನ ಹಾಸಿಗೆಯಾಗಿರುವುದೋ ಎಂಬುದನ್ನು ಕಾದು ನೋಡಬೇಕಿದೆ.