ಪಾಕ್​ನಲ್ಲಿ ಅಧಿಕಾರದ ಸನಿಹಕ್ಕೆ ಇಮ್ರಾನ್​ ಖಾನ್​: ಪ್ರತಿಪಕ್ಷಗಳಿಂದ ಕ್ಯಾತೆ- ಮತ ಎಣಿಕೆ ಪ್ರಕ್ರಿಯೆ ವಿಳಂಬ

ಇಸ್ಲಾಮಾಬಾದ್​: ಪಾಕಿಸ್ತಾನದ ಕ್ರಿಕೆಟ್​ ಐಕಾನ್​, ಟರ್ನ್​ ಪೊಲಿಟಿಕಲ್​ ಲೀಡರ್ ಇಮ್ರಾನ್​ ಖಾನ್​ ಅವರ ಪಾಕಿಸ್ತಾನ್​ ತೆಹ್ರಿಕ್​ ಐ ಇನ್ಸಾಫ್​ ಪಕ್ಷ ನಿನ್ನೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದ ಸನಿಹಕ್ಕೆ ಬಂದು ನಿಂತಿದೆ.

ಆದರೆ, ಪ್ರತಿಪಕ್ಷಗಳು ಕ್ಯಾತೆ ತೆಗೆದಿದ್ದು, ಮತ ಎಣಿಕೆ ಕಾರ್ಯ ನಿಧಾನಗೊಂಡಿದೆ. ಮಧ್ಯೆರಾತ್ರಿ ವೇಳೆಗೆ ಫಲಿತಾಂಶ ಹೊರ ಬೀಳಬೇಕಿತ್ತು. ಆದರೆ, ಇದುವರೆಗೂ ಅಂತಿಮ ಫಲಿತಾಂಶ ಘೋಷಣೆಯಾಗಿಲ್ಲ.

272 ಸದಸ್ಯ ಬಲದ ಪಾಕ್​ ಸಂಸತ್​ನಲ್ಲಿ 137 ಸ್ಥಾನಗಳನ್ನ ಪಡೆಯುವ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ. ಇತ್ತೀಚಿನ ವರದಿ ಪ್ರಕಾರ ಇಮ್ರಾನ್​ ಖಾನ್​ ನೇತೃತ್ವದ ಪಿಟಿಐ ಪಕ್ಷ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅತಿದೊಡ್ಡಪಕ್ಷವಾಗಿ ಹೊರಹೊಮ್ಮಿದೆ. ಇನ್ನು 61 ಸ್ಥಾನಗಳಲ್ಲಿ ನವಾಜ್​ ಷರೀಪ್​ ಅವರ ಪಿಎಂಎಲ್​ -ಎನ್​ ಪಕ್ಷ  ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇತ್ತ, ಬಿಲಾವಲ್ ಬೂಟ್ಟೋ ನೇತೃತ್ವದ ಪಿಪಿಪಿ ಪಾರ್ಟಿ ಕೇವಲ 40 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇತರರು 50 ಸ್ಥಾನಗಳನ್ನು ಗಳಿಸಿಕೊಂಡಿದ್ದಾರೆ.

ಜೈಲು ಸೇರಿರುವ ನವಾಜ್​ ಷರೀಫ್​ ಅವರ ಬೆಂಬಲಿಗರು, ಪಾಕ್​ ಪ್ರಜಾಪ್ರಭುತ್ವದ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ನಡುವೆ ಪಾಕ್​ ಷೇರುಪೇಟೆ ಶೇ 2ರಷ್ಟು  ಆರಂಭಿಕ ಕುಸಿತ ಕಂಡಿದೆ. ಮತ್ತೊಂದೆಡೆ ಪಾಕ್​ ಆರ್ಥಿಕತೆ ಕುಸಿತಕಂಡಿದ್ದು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್​ನಿಂದ ಬೇಲ್​ಔಟ್​ ಪಡೆಯಬೇಕಾದ ಪರಿಸ್ಥಿತಿ ಇದೆ. ಈ ನಡುವೆ ಲೀಡ್​ನಲ್ಲಿರುವ ಪಿಟಿಐ ಪಕ್ಷ ಚೀನಾದಿಂದ ಸಹಾಯ ಪಡೆಯುವುದನ್ನ ಅಲ್ಲಗಳೆದಿಲ್ಲ.

ಎಲೆಕ್ಷನ್​ ಕಮಿಷನ್​ ಆಫ್​ ಪಾಕಿಸ್ತಾನ್​ ಕಾರ್ಯದರ್ಶಿ ತಾಂತ್ರಿಕ ಸಮಸ್ಯೆಗಳಿಂದ ಮತಎಣಿಕೆ ಕಾರ್ಯ ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಈ ನಡುವೆ ಚೀಫ್​ ಎಲೆಕ್ಷನ್​ ಕಮಿಷನರ್​ ಸರ್ದಾರ್​ ಮೊಹಮ್ಮದ್​ ಚುನಾವಣೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆದಿದೆ ಎಂದು ಸಮರ್ಥಿಸಿಕೊಂಡಿದ್ದು, ಕೆಲ ಪಕ್ಷಗಳ ಆರೋಪವನ್ನ ಸಾರಾಸಗಟಾಗಿ ಅಲ್ಲಗಳೆದಿದ್ದಾರೆ.

ಆದರೆ, ಈ ಫಲಿತಾಂಶವನ್ನ ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಪಾಕಿಸ್ತಾನದ ಪ್ರಜಾಪ್ರಭುತ್ವಕ್ಕೆ ಈ ಚುನಾವಣೆ ಮಾರಕವಾಗಿದೆ ಎಂದು ಪಿಎಂಎಲ್​- ಎನ್​ ಪಕ್ಷದ ನೇತಾರ ಶಬಾಜ್​ ಆರೋಪಿಸಿದ್ದಾರೆ. ಅತ್ತ ಪಿಪಿಪಿ ಕೂಡಾ ಇದು ಮತ್ತೊಂದು ಪ್ರಮಾದದ ಸಿರೀಯಸ್​ ಥ್ರೆಟ್​ ಎಂದು ಪ್ರತಿಕ್ರಿಯೆ ನೀಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ