ಮೈಸೂರು,ಜು.26-ಚುಂಚನಕಟ್ಟೆಯಲ್ಲಿ ಆಗಸ್ಟ್ 11ರಂದು ನಡೆಯಲಿರುವ ಜಲಪಾತೋತ್ಸವವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾತ್ರಿ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಚುಂಚನಕಟ್ಟೆ, ಭರಚುಕ್ಕಿ-ಗಗನಚುಕ್ಕಿಯಲ್ಲಿ ಜಲಪಾತೋತ್ಸವ ಆಚರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಚುಂಚನಕಟ್ಟೆಯಲ್ಲಿ ಆ.11 ಮತ್ತು 12ರಂದು, ಭರಚಿಕ್ಕಿಯಲ್ಲಿ 18-19ರಂದು ಹಾಗೂ ಗಗನಚುಕ್ಕಿಯಲ್ಲಿ25-26ರಂದು ಜಲಪಾತೋತ್ಸವ ಆಚರಿಸಲು ನಿರ್ಧರಿಸಲಾಗಿದೆ.
ಜಲಪಾತೋತ್ಸವ ವೀಕ್ಷಿಸಲು ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಲೆಮರೆ ಕಾಯಿಯಂತೆ ಇರುವ ಪ್ರತಿಭಾನ್ವಿತರನ್ನು ಗುರುತಿಸಿ ಅವರಿಗೂ ಸಹ ಉತ್ಸವದಲ್ಲಿ ಅವಕಾಶ ಕಲ್ಪಿಸಿಕೊಡಲು ತೀರ್ಮಾನಿಸಲಾಯಿತು.
ಈ ಕಾರ್ಯಕ್ರಮವು ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವುದರಿಂದ ಹಳ್ಳಿಯ ಅಭಿವೃದ್ದಿಗೆ ತಕ್ಕಂತೆ ಉಡುಗೆ-ತೊಡುಗೆ ಬಗ್ಗೆ ಆಯೋಜಕರು ಗಮನಹರಿಸಬೇಕು. ಈ ಮೂರು ಕಡೆ ನಡೆಯುವ ಜಲಪಾತೋತ್ಸವ ದಿನಗಳಂದು ರಾತ್ರಿ 11 ಗಂಟೆವರೆಗೂ ಗಸ್ತು ಹೆಚ್ಚಿಸಬೇಕೆಂದು ಸೂಚಿಸಿದರು.
ಕಾರ್ಯಕ್ರಮಕ್ಕೆ ಹೊರಗಿನ ಕಲಾವಿದರನ್ನು ಕರೆಯುವ ಬದಲಾಗಿ ಸ್ಥಳೀಯ ಕಲಾವಿದರಿಗೆ, ಜಾನಪದ ಕಲಾ ತಂಡಗಳಿಗೆ ಅವಕಾಶ ಕಲ್ಪಿಸಬೇಕು. ಪ್ರವಾಸಿ ತಾಣಗಳನ್ನು ಹೆಚ್ಚಾಗಿ ಬಿಂಬಿಸಬೇಕು ಎಂದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮು, ಜಿಪಂ ಸಿಇಒ ಶಿವಶಂಕರ್, ಅಪರ ಪೆÇಲೀಸ್ ಅಧೀಕ್ಷಕ ಅರುಣಾಂಗೂ ಗಿರಿ, ಅಪರ ಜಿಲ್ಲಾಧಿಕಾರಿ ಯೋಗೀಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.