ಕ್ರಿಕೆಟ್: ಏಷ್ಯಾ ಕಪ್ 2018 ವೇಳಾಪಟ್ಟಿ ಪ್ರಕಟ; ಭಾರತ-ಪಾಕ್ ಕದನಕ್ಕೆ ಮುಹೂರ್ತ ಫಿಕ್ಸ್

ನವದೆಹಲಿ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ 2018ರ ವೇಳಾಪಟ್ಟಿ ಪ್ರಕಟವಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಕದನಕ್ಕೆ ಸೆಪ್ಟೆಂಬರ್ 19ರಂದು ಮುಹೂರ್ತ ಫಿಕ್ಸ್ ಆಗಿದೆ.
2018ನೇ ಸಾಲಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆಗೊಳಿಸಿದೆ. ಯುಎಇ ಆತಿಥ್ಯ ವಹಿಸುತ್ತಿರುವ 2018ರ ಏಷ್ಯಾ ಕಪ್‌ನಲ್ಲಿ ಹಾಲಿ ಚಾಂಪಿಯನ್ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಆಫ್ಘಾನಿಸ್ತಾನ ಸೇರಿದಂತೆ ಒಟ್ಟು ಆರು ತಂಡಗಳು ಭಾಗವಹಿಸುತ್ತಿದೆ. ಆರು ತಂಡಗಳನ್ನು ಒಟ್ಟು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ಕ್ವಾಲಿಫೈಯರ್ (ಇನ್ನಷ್ಟೇ ಅರ್ಹತೆ ಪಡೆಯಬೇಕಿದೆ) ತಂಡವೊಂದು ಇರಲಿದೆ. ಹಾಗೆಯೇ ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನ ತಂಡಗಳು ಸ್ಥಾನ ಗಿಟ್ಟಿಸಿಕೊಂಡಿದೆ.
ಇನ್ನು ಕ್ವಾಲಿಫೈಯರ್ ಹಂತದಲ್ಲಿ ಯುಎಇ, ಸಿಂಗಾಪುರ, ಒಮಾನ್, ನೇಪಾಳ, ಮಲೇಷ್ಯಾ ಹಾಗೂ ಹಾಂಕಾಂಗ್ ತಂಡಗಳು ಪೈಪೋಟಿ ನಡೆಸಲಿದ್ದು, ಈ ತಂಡಗಳ ಪೈಕಿ ಒಂದು ತಂಡ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ.
ಸೆಪ್ಟೆಂಬರ್ 15ರಂದು 2018ರ ಏಷ್ಯಾ ಕಪ್‌ ಟೂರ್ನಿಗೆ ಚಾಲನೆ ದೊರಕಲಿದ್ದು, ಟೂರ್ನಿಯ ಉದ್ಘಾಟನಾ ಪಂದ್ಯ ದುಬೈನಲ್ಲಿ ನಡೆಯಲಿದ್ದು, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಇನ್ನು ದುಬೈನಲ್ಲಿ ಸೆಪ್ಟೆಂಬರ್ 28ರಂದು ಫೈನಲ್ ಪಂದ್ಯ ನಡೆಯಲಿದೆ.  ಸೆಪ್ಟೆಂಬರ್ 18ರಂದು ಕ್ವಾಲಿಫೈಯರ್ ವಿರುದ್ಧ ಮೊದಲ ಪಂದ್ಯವನ್ನಾಡುವ ಭಾರತ ಸೆಪ್ಟೆಂಬರ್ 19ರಂದು ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ಸವಾಲನ್ನು ಎದುರಿಸಲಿದೆ. ಈ ಮೂಲಕ ವಿರಾಮವಿಲ್ಲದೆ ಸತತ ಎರಡು ಪಂದ್ಯಗಳನ್ನು ಆಡಲಿದೆ.
ಪ್ರತಿ ಗುಂಪಿನಿಂದಲೂ ಅಗ್ರ ಎರಡು ತಂಡಗಳು ‘ಸೂಪರ್ ಫೋರ್’ ಹಂತಕ್ಕೆ ತೇರ್ಗಡೆಯನ್ನು ಹೊಂದಲಿದೆ. ಬಳಿಕ ಅಗ್ರ ಎರಡು ತಂಡಗಳು ಪ್ರಶಸ್ತಿಗಾಗಿ ಸೆಣಸಲಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ