ಮುಂಬೈ:ಜು-25: ಮರಾಠ ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು ಮತ್ತೊಬ್ಬ ಪ್ರತಿಭಟನಾಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ ವೇಳೆ ಮರಾಠ ಸಮುದಾಯದ ಸದಸ್ಯ ಜಗನ್ನಾಥ್ ಸೊನಾವನೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸೋನವಾನೆ ಸಾವನ್ನು ಅನುಸರಿಸಿ ಕೋಪೋದ್ರಿಕ್ತರಾಗಿರುವ ಪ್ರತಿಭಟನಕಾರರು ಮುಂಬಯಿಯಲ್ಲಿ ಮಾತ್ರವಲ್ಲದೆ ಇನ್ನೂ ಹಲವು ಕಡೆಗಳಲ್ಲಿ ರಸ್ತೆಗಳನ್ನು ಬ್ಲಾಕ್ ಮಾಡಿ ವಾಹನ ಸಂಚಾರವನ್ನು ತಡೆದಿದ್ದಾರೆ. ಅಲ್ಲದೇ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಲಾಗುತ್ತಿದೆ.
ಸೋಮವಾರ ಮೀಸಲಾತಿ ಪ್ರತಿಭಟನಕಾರ ಕಾಕಾಸಾಹೇಬ್ ಶಿಂಧೆ ಔರಂಗಾಬಾದ್ ಸಮೀಪ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಪ್ರತಿಭಟನೆ ತೀವ್ರಗೊಂಡಿತ್ತು. ಇದರ ಬೆನ್ನಲ್ಲೇ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದರು. ಇಂದು ಮತ್ತೋರ್ವ ಪ್ರತಿಭಟನಾಕಾರ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಈ ನಡುವೆ ಆತ್ಮಹತ್ಯೆ ಮಾಡಿಕೊಂಡಿರುವ ಕಾಕಾಸಾಹೇಬ್ ಶಿಂಧೆ ಮತ್ತು ಜಗನ್ನಾಥ ಸೋನವಾನೆ ಅವರಿಗೆ ಹುತಾತ್ಮ ಸ್ಥಾನಮಾನ ನೀಡಬೇಕೆಂದೂ ಮರಾಠ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ನಿನ್ನೆ ನಡೆದ ಆಂದೋಲನ ಹಿಂಸೆಗೆ ತಿರುಗಿದ ಪರಿಣಾಮವಾಗಿ ಕಲ್ಲೆಸೆತಕ್ಕೆ ಗುರಿಯಾಗಿ ಓರ್ವ ಕಾನ್ಸ್ಟೆಬಲ್ ಮೃತಪಟ್ಟು ಇತರ 9 ಮಂದಿ ಪೊಲೀಸರು ಗಾಯಗೊಂಡಿದ್ದರು. ಮೂವರು ಪ್ರತಿಭಟನಕಾರರು ಆತ್ಮಹತ್ಯೆಗೆ ಯತ್ನಿಸಿದ್ದರು. ಪೊಲೀಸ್ ಮತ್ತು ಇತರ ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.
Maratha reservation protest,One more protestor Jagannath Sonavne,suicide