ಹುಬ್ಬಳ್ಳಿ- ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಯಶಸ್ವಿಯಾಗಲು ಸಾಧ್ಯವಿಲ್ಲ. ಮತ್ತೊಮ್ಮೆ ನರೇಂದ್ರ ಮೋದಿಯವರೇ ಪ್ರಧಾನಿಯಾಗುವುದು ಖಚಿತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತೃತೀಯರಂಗ ನಾಯಕತ್ವವನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಅವರಲ್ಲೇ ಒಗ್ಗಟ್ಟಿಲ್ಲ. ಮೋದಿಯವರ ನಡೆ ಹಾಗೂ ಅವರ ಅಭಿವೃದ್ದಿಯೇ ಮುಂದಿನ ಚುನಾವಣೆಗೆ ಸಹಕಾರಿಯಾಗಲಿದೆ ಎಂದರು. ಬಜೆಟ್ ನಲ್ಲಿ 55 ಸಾವಿರ ಕೋಟಿ ಬಿಡುಗಡೆ ಮಾಡಿರುವುದನ್ನು ಅಂಕಿಸಂಖ್ಯೆಯ ಮೂಲಕ ಸ್ಪಷ್ಟಪಡಿಸಲಿ. ಯಾವ ಯಾವ ಇಲಾಖೆಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬುದನ್ನು
ಮುಖ್ಯಮಂತ್ರಿಗಳು ಬಜೆಟ್ ನ ಪ್ರತಿ ಶೀಘ್ರವೇ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದ ಅವರು, ನರೇಂದ್ರ ಮೋದಿಯವರೇ ಮುಂದಿನ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ ಎಂದರು. ಬಜೆಟ್ ಗೆ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ಸಿದ್ಧ ಎಂದಿರುವುದರಲ್ಲಿ ಅರ್ಥವೇ ಇಲ್ಲ. ರಾಜ್ಯದ 50 ಹೊಸ ತಾಲೂಕುಗಳಲ್ಲಿ 38 ತಾಲೂಕುಗಳು ಉತ್ತರ ಕರ್ನಾಟಕದಲ್ಲಿವೆ. ಪ್ರತಿ ತಾಲೂಕಿಗೆ ಕನಿಷ್ಟ 5 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಉತ್ತರ ಕರ್ನಾಟಕಕ್ಕೆ ಬಜೆಟ್ ನಲ್ಲಿ ಅನ್ಯಾಯವಾಗಿದ್ದು, ಮುಖ್ಯಮಂತ್ರಿಗಳು ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಯಾರ ಕಾಲದಲ್ಲಿ ಎಷ್ಟು ಅನುದಾನ ಖರ್ಚಾಗಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.