ಅಮೆರಿಕಾ: ನ್ಯೂಪೊರ್ಟ್ ನಲ್ಲಿ ನಿನ್ನೆ ನಡೆದ ಹಾಲ್ ಆಫ್ ಫೇಮ್ ಓಪನ್ ಟೂರ್ನಮೆಂಟ್ ನಲ್ಲಿ ಭಾರತದ ಟೆನ್ನಿಸ್ ಆಟಗಾರ ರಾಮ್ ಕುಮಾರ್ ರಾಮನಾಥನ್ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ 23 ವರ್ಷದ ರಾಮ್ ಕುಮಾರ್ ರಾಮನಾಥನ್ ಅಮೆರಿಕಾದ ಟಿಮ್ ಸ್ಮಿಕ್ಜೆಕ್ ಅವರನ್ನು 6-4, 7-5 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದರು.
ರಾಮ್ ಕುಮಾರ್ ಮೊದಲ ಸರ್ವ್ ಮೂಲಕ ಶೇ. 72 ರಷ್ಟು ಅಂಕಗಳನ್ನು ಪಡೆದರು, ಎರಡನೇ ಸರ್ವ್ ಮೂಲಕ ಶೇ. 62 ರಷ್ಟು ಅಂಕ ಪಡೆಯುವ ಮೂಲಕ ಪ್ರಭಾವ ಬೀರಿದರು.
ಫೈನಲ್ ಪಂದ್ಯದಲ್ಲಿ ರಾಮ್ ಕುಮಾರ್ ಇಂದು ಸ್ಪೆನ್ ನ ಗ್ರಾನೊಲ್ಲರ್ಸ್ ಮತ್ತು ಅಮೆರಿಕಾದ ಸ್ಟಿವ್ ಜಾನ್ಸನ್ ನಡುವೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲುವ ಆಟಗಾರರ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.
2011 ರಲ್ಲಿ ಭಾರತದ ಸೋಮದೇವ್ ದೇವ್ ವರ್ಮಾ ದಕ್ಷಿಣ ಆಫ್ರಿಕಾದ ವೈಲ್ಡ್ ಕಾರ್ಡ್ ಐಜಾಕ್ ವ್ಯಾನ್ ಡೆರ್ ಮಾರ್ವೆ ಅವರನ್ನು ಸೋಲಿಸುವ ಮೂಲಕ ಎಟಿಪಿ ವರ್ಲ್ಡ್ ಟೂರ್ನಮೆಂಟ್ ನಲ್ಲಿ ಫೈನಲ್ ಪ್ರವೇಶಿಸಿದ್ದರು. ಫೈನಲ್ ಪಂದ್ಯದಲ್ಲಿ ಕೆವಿನ್ ಆಂಡರ್ಸನ್ ವಿರುದ್ಧ ಸೋಮದೇವ್ ಸೋಲಿಗೆ ಶರಣಾಗಿದ್ದರು. ನ್ಯೂ ಪೊರ್ಟ್ ಟೂರ್ನಮೆಂಟ್ ಭಾರತೀಯ ಆಟಗಾರರಿಗೆ ನೆಚ್ಚಿನ ಮೈದಾನವಾಗಿದೆ. ಈ ಹಿಂದೆ ಭಾರತೀಯ ಲೆಜೆಂಡ್ ವಿಜಯ್ ಅರ್ಮಿತ್ ರಾಜ್ 1976, 1980, 1984 ರಲ್ಲಿ ಹಾಲ್ ಆಫ್ ಫೇಮ್ ಒಪನ್ ಸಿಂಗಲ್ಸ್ ಸುತ್ತಿನಲ್ಲಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ.
ವಿಜಯ್ ಅರ್ಮಿತ್ ರಾಜ್ ಅವರ ಪುತ್ರ ಪ್ರಕಾಶ್ ಅರ್ಮಿತ್ ರಾಜ್ 2008ರಲ್ಲಿ ನಡೆದ ಹಾಲ್ ಆಫ್ ಓಪನ್ ಟೂರ್ನಮೆಂಟ್ ನಲ್ಲಿ ಫೈನಲ್ ಪ್ರವೇಶಿಸಿದ್ದರು.
ಒಂದು ವೇಳೆ ರಾಮ್ ಕುಮಾರ್ ಟೂರ್ನಮೆಂಟ್ ನಲ್ಲಿ ಗೆದ್ದರೆ ಲಿಯಾಂಡರ್ ಪೇಸ್ 1998ರಲ್ಲಿ ಜಯಿಸಿದ 20 ವರ್ಷದ ನಂತರ ಭಾರತದ ಮೊದಲ ಭಾರತೀಯ ಆಟಗಾರನೊಬ್ಬ ಪ್ರಶಸ್ತಿ ಗೆದ್ದಂತಾಗುತ್ತದೆ.