ರಾಮೇಶ್ವರಂ, ಜು.22-ಭಾರತ ಮತ್ತು ಶ್ರೀಲಂಕಾ ಜಲ ಗಡಿ ಬಳಿ ತಮಿಳುನಾಡಿನ ಮೀನುಗಾರರು ಮತ್ತು ದ್ವೀಪರಾಷ್ಟ್ರದ ನೌಕಾಪಡೆ ಯೋಧರ ನಡುವೆ ಮತ್ತೆ ಘರ್ಷಣೆ ಭುಗಿಲೆದ್ದಿದೆ.
ಎರಡೂ ರಾಷ್ಟ್ರಗಳ ಜಲ ಗಡಿ ಪ್ರದೇಶವಾದ ಕಚ್ಚತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ 3,000ಕ್ಕೂ ಹೆಚ್ಚು ಬೆಸ್ತರನ್ನು ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ಹೆದರಿಸಿ ಓಡಿಸಿರುವ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ. ರಾಮೇಶ್ವರಂ ಒಳನಾಡು ಪಟ್ಟಣದ ಮೀನುಗಾರರು 564 ದೋಣಿಗಳಲ್ಲಿ ಕಚ್ಚತೀವು ದ್ವೀಪ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದರು. ಆಗ ಸ್ಥಳಕ್ಕೆ ಬಂದ ನೌಕಾಪಡೆ ಯೋಧರು, 20 ದೋಣಿಗಳ ಬಲೆಗಳನ್ನು ಹರಿದು ಹಾಕಿದರು. ಬಂದೂಕು ತೋರಿಸಿ ಬೆದರಿಸಿ ಓಡಿಸಿ ಬೆನ್ನಟ್ಟಿದರು ಎಂದು ತಮಿಳುನಾಡು ಯಾಂತ್ರೀಕೃತ ದೋಣಿಗಳ ಮೀನುಗಾರರ ಸಂಘದ ಅಧ್ಯಕ್ಷ ಪಿ.ಸೆಸುರಾಜ ಆರೋಪಿಸಿದ್ದಾರೆ.
ಲಂಕಾ ನೌಕಾಪಡೆಯ ದೌರ್ಜನ್ಯದಿಂದಾಗಿ ಬೆಸ್ತರು ಮೀನುಗಾರಿಕೆ ನಡೆಸದೇ ಬರಿಗೈನಲ್ಲಿ ಹಿಂದಿರುಗಿದ್ದಾರೆ. ಜಲ ಪ್ರದೇಶದಲ್ಲಿ ದ್ವೀಪರಾಷ್ಟ್ರ ನೌಕಾ ಯೋಧರ ಪುನರಾವರ್ತಿತ ಕಿರುಕುಳದಿಂದ ಬೆಸ್ತರ ಜೀವನೋಪಾಯಕ್ಕೆ ತೊಂದರೆಯಾಗಿದೆ. ದೀರ್ಘಕಾಲದ ಈ ಸಮಸ್ಯೆಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಜೂನ್ 28ರಂದು ಇದೇ ಪ್ರದೇಶದಿಂದ ಶ್ರೀಲಂಕಾ ಕರಾವಳಿ ರಕ್ಷಣಾ ಪಡೆ ಯೋಧರು 2,500ಕ್ಕೂ ಹೆಚ್ಚು ತಮಿಳು ಮೀನುಗಾರರನ್ನು ಬೆದರಿಸಿ ಓಡಿಸಿದ್ದರು.