ನವದೆಹಲಿ, ಜು.22- ಮುಂದಿನ ಲೋಕಸಭೆ ಚುನಾವಣೆಗೆ ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಬಿಜೆಪಿ, ಸಾಮಾಜಿಕ ಜಾಲತಾಣಗಳ ಮೂಲಕವೇ ಮತ್ತಷ್ಟು ಯುವಜನರನ್ನು ತಲುಪಲು ವೇದಿಕೆಯನ್ನು ಸಜ್ಜುಗೊಳಿಸುತ್ತಿದೆ.
ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವ ಯುವ ಜನತೆಯನ್ನು ಮತ್ತಷ್ಟು ಪಕ್ಷದತ್ತ ಗಮನ ಸೆಳೆಯಲು ಮುಂದಾಗಿದ್ದು, ಈಗಾಗಲೇ ದೆಹಲಿಯ ಬಿಜೆಪಿ ಘಟಕ ನೂರಾರು ವಾಟ್ಸಾಪ್ ಗ್ರೂಪ್ಗಳನ್ನು ರಚಿಸಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಪ್ರತಿ ಗ್ರೂಪ್ನ ಸದಸ್ಯರನ್ನಾಗಿ ಮಾಡಲಾಗಿದೆ.
2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ದೆಹಲಿ ಘಟಕದ ನಾಯಕರು ಮಂಡಲ ತಳಮಟ್ಟದವರೆಗೆ ತಂಡಗಳನ್ನು ಪರಿಷ್ಕರಿಸುತ್ತಿದ್ದು, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ವಾಟ್ಸಾಪ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳ ವೇದಿಕೆಗೆ ಒಗ್ಗೂಡಿಸುತ್ತಿದೆ.
ಸಾಮಾಜಿಕ ಮಾಧ್ಯಮ ಕಾರ್ಯಕರ್ತರಿಗೆ ಮತ್ತು ಪಕ್ಷದ ನಾಯಕರಿಗೆ ನಕಲಿ ಸುದ್ದಿ ಹಬ್ಬಿಸದಂತೆ ಮತ್ತು ತಪ್ಪು ಸಂದೇಶಗಳನ್ನು ರವಾನಿಸದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಈ ವಾಟ್ಸಪ್ ಗ್ರೂಪ್ಗಳನ್ನು ರಚಿಸಲಾಗಿದೆ. ಪ್ರತಿ ವಾಟ್ಸಾಪ್ ಗ್ರೂಪ್ ನಲ್ಲಿ ಅಮಿತ್ ಶಾ ಅವರ ಸಂಪರ್ಕ ಸಂಖ್ಯೆ ಮತ್ತು ದೆಹಲಿಯ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿಯವರ ಸಂಖ್ಯೆಯಿರುತ್ತದೆ ಎಂದು ದೆಹಲಿ ಬಿಜೆಪಿ ಘಟಕದ ಸಾಮಾಜಿಕ ಮಾಧ್ಯಮ ಘಟಕದ ಸಹ ಮುಖ್ಯಸ್ಥ ನೀಲಕಂಠ ಬಕ್ಷಿ ತಿಳಿಸಿದ್ದಾರೆ.
ಅಲ್ಲದೆ ಸಾಮಾಜಿಕ ಮಾಧ್ಯಮ ಸಭೆಗಳನ್ನು ಜಿಲ್ಲಾ ಮತ್ತು ಮಂಡಳ ಮಟ್ಟಗಳಲ್ಲಿ ನಡೆಸಲು ಪಕ್ಷ ಯೋಜಿಸಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್ ಡಿಎ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು ಬಿಜೆಪಿ ಉದ್ದೇಶವಾಗಿದೆ.