ಹೊಸದಿಲ್ಲಿ: ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟಿಡಿಪಿ ಅವಿಶ್ವಾನ ನಿರ್ಣಯ ಮಂಡಿಸಿದೆ. ಆಂಧ್ರ ಪ್ರದೇಶದ ಟಿಡಿಪಿ ಸಂಸದ ಜಯದೇವ್ ಗಲ್ಲಾ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದರು.
ಅವಿಶ್ವಾಸ ಮಂಡನೆ ವೇಳೆ ಮೋದಿಯವರನ್ನು ಮಾರ್ಮಿಕವಾಗಿ ತಿವಿದ ಜಯದೇವ್ ಗಲ್ಲಾ, ಮೋದಿಯವರು 2014ರ ಲೋಕಸಭಾ ಚುನಾವಣೆಗೂ ಮುನ್ನ ಹೇಳಿದ್ದು ನಾ ಖಾವೂಂಗಾ, ನಾ ಖಾನೇ ದೂಂಗಾ (ನಾನೂ ತಿನ್ನಲ್ಲ, ಪರರಿಗೂ ತಿನ್ನಲು ಬಿಡಲ್ಲ) ಆದರೆ ಜನಾರ್ದನ ರೆಡ್ಡಿಯಂಥ ಭ್ರಷ್ಟರ ಬೆಂಬಲಕ್ಕೆ ಮೋದಿ ಮತ್ತು ಅವರ ಸರ್ಕಾರ ನಿಂತಿದೆ ಎಂದು ಗಲ್ಲಾ ಆರೋಪಿಸಿದರು.
ಜನಾರ್ದನ ರೆಡ್ಡಿ ವಿರುದ್ಧ ಆಂಧ್ರ ಪ್ರದೇಶ ಸೇರಿದಂತೆ ಕರ್ನಾಟದಲ್ಲಿ ಹಲವಾರು ಪ್ರಕರಣಗಳಿವೆ. ಆದರೆ ಅಂಥವರನ್ನು ಬಿಜೆಪಿ ಸಲಹುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಜಯದೇವ್ ಗಲ್ಲಾರ ಅವಿಶ್ವಾಸ ನಿರ್ಣಯ ಮಂಡನೆಯ ನಡುವೆಯೇ ಬಿಜೆಪಿ ಸಂಸದರು ಗದ್ದಲ ಮಾಡಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ಮಧ್ಯ ಪ್ರವೇಶಿಸಿ ಗದ್ದಲವನ್ನು ತಿಳಿ ಗೊಳಿಸಿದರು.
ನರೇಂದ್ರ ಮೋದಿಯವರು ಆಂಧ್ರ ಪ್ರದೇಶಕ್ಕೆ ಕೊಟ್ಟ ಮಾತಿಗೆ ಮೋಸ ಮಾಡಿದ್ದಾರೆ. ಆಂಧ್ರ ಪ್ರದೇಶ ವಿಭಜನೆಯಾದ ನಂತರ ಸಾವಿರಾರು ಕೋಟಿ ರೂಗಳ ನಷ್ಟವನ್ನು ರಾಜ್ಯ ಅನುಭವಿಸಿದೆ. ಕೇಂದ್ರ ವಿಶೇಷ ಸ್ಥಾನಮಾನವನ್ನು ಆಂಧ್ರ ಪ್ರದೇಶಕ್ಕೆ ನೀಡಲು ಮೀನಾಮೇಷ ಎಣಿಸುತ್ತಿದೆ. ಈಶಾನ್ಯ ರಾಜ್ಯಗಳು ದಶಕಗಳಿಂದ ವಿಶೇಷ ಸವಲತ್ತು ಪಡೆದಿದೆ. ಅದೇ ರೀತಿ ಹಲವು ರಾಜ್ಯಗಳಿಗೂ ಕೇಂದ್ರ ಸವಲತ್ತು ನೀಡುತ್ತಿದೆ. ಆದರೆ ಆಂಧ್ರ ಪ್ರದೇಶದ ಜನತೆ ನರಳುತ್ತಿರುವುದು ಗೊತ್ತಿದ್ದೂ ಕೇಂದ್ರ ಸಹಾಯ ಮಾಡುತ್ತಿಲ್ಲ ಎಂದು ಗಲ್ಲಾ ಆರೋಪಿಸಿದ್ದಾರೆ.
ಗಲ್ಲಾ ಮಾತಿನ ನಡುವೆ ಸ್ಪೀಕರ್ ಸುಮಿತ್ರಾ ಮಹಾಜನ್ ಮಧ್ಯ ಪ್ರವೇಶಿಸಿ ಇನ್ನೂ ಎಷ್ಟು ಹೊತ್ತು ಬೇಕು ಎಂದು ಕೇಳಿದರು. ಅದಕ್ಕೆ ಅರ್ಧ ಗಂಟೆಯಾದರೂ ಬೇಕು ಎಂದು ಗಲ್ಲಾ ತಿಳಿಸಿದರು. ಆದರೆ ಅಷ್ಟು ಸಮಯ ನೀಡಲು ಸಾಧ್ಯವಿಲ್ಲ, ಐದು ನಿಮಿಷದಲ್ಲಿ ಮುಗಿಸಿ ಎಂದು ಸ್ಪೀಕರ್ ಸೂಚಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಯದೇವ್ ಗಲ್ಲಾ, ಅವಿಶ್ವಾಸ ನಿರ್ಣಯ ಮಂಡನೆಯ ಇತಿಹಾಸವನ್ನು ತಿಳಿದುಕೊಂಡಿದ್ದೇನೆ. ಅವಿಶ್ವಾಸ ನಿರ್ಣಯವನ್ನು ಗಂಟೆಗಟ್ಟಲೇ ಮಂಡಿಸಿರುವ ಇತಿಹಾಸವಿದೆ, ದಯವಿಟ್ಟು ಸಮಯ ನೀಡಿ ಎಂದು ಕೇಳಿದರು. ಅದಕ್ಕೆ ಸ್ಪೀಕರ್ ಸಮ್ಮತಿಸಿದರು.