ಮೈಸೂರು, ಜು.20-ಶಿಕ್ಷಣ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಪ್ರಾಥಮಿಕ-ಪ್ರೌಢಶಿಕ್ಷಣ ಇಲಾಖೆ ಸಚಿವ ಎನ್.ಮಹೇಶ್ ತಿಳಿಸಿದರು. ಮೊದಲ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಶಿಕ್ಷಕರ ಮೀಸಲಾತಿ ಬಡ್ತಿ ಬಗ್ಗೆ ಪಟ್ಟಿ ಸಿದ್ಧವಾಗಿದೆ. ಇದನ್ನು ಮಾಡಲು ಮುಖ್ಯಮಂತ್ರಿಗಳು ಕೂಡ ಒಲವು ತೋರಿದ್ದಾರೆ. ಆದರೆ ಈ ವಿಷಯ ನ್ಯಾಯಾಲಯದಲ್ಲಿದೆ. ಹಾಗಾಗಿ ಈಗ ಅದನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ನಾನು ಶಾಸಕನಾಗುವ ಮುಂಚೆಯೇ ಚಾಮುಂಡಿಬೆಟ್ಟಕ್ಕೆ ಆಷಾಢ ಮಾಸದಲ್ಲಿ ಬಂದು ದೇವಿದರ್ಶನ ಪಡೆದಿದ್ದೆ. ಈಗ ಸಚಿವನಾಗಿದ್ದೇನೆ ಎಂಬ ಕಾರಣದಿಂದಾಗಿಯೇನೂ ಬಂದಿಲ್ಲ. ಮೊದಲಿನಿಂದಲೂ ಬರುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಎನ್.ಮಹೇಶ್ ಉತ್ತರಿಸಿದರು.