ಮಡಿಕೇರಿ, ಜು.20- ತಲಕಾವೇರಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ವಿಷಯದಲ್ಲಿ ನನಗೆ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇಂದು ಬೆಳಗ್ಗೆ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ಹಾಗೂ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರು ಕೊಟ್ಟಿರುವ ಅಧಿಕಾರವನ್ನು ದೇವರೇ ಕಾಪಾಡಬೇಕು ಎಂದರು.
ಭಯ, ಭಕ್ತಿಯಿಂದ ನಾಡಿನ ಜನರಿಗೆ ಸಂಪೂರ್ಣ ಅನುಗ್ರಹ ನೀಡುವಂತೆ ಪ್ರಾರ್ಥನೆ ಮಾಡಲು ಬಂದಿದ್ದೇವೆ. ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ತಲಕಾವೇರಿಗೆ ಬಂದು ಅಧಿಕಾರ ಕಳೆದುಕೊಂಡರು ಎಂಬುದನ್ನು ಮಾಧ್ಯಮದಲ್ಲಿ ಗಮನಿಸಿದ್ದೇನೆ. 19 ವರ್ಷಗಳ ನಂತರ ಮುಖ್ಯಮಂತ್ರಿಯಾಗಿ ನಾನೂ ಭೇಟಿ ನೀಡುತ್ತಿರುವುದೂ ಕೂಡ ಮಾಧ್ಯಮದಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ ಎಂದು ಹೇಳಿದರು.
ಮೂಢನಂಬಿಕೆಗಳನ್ನು ಮೊದಲಿನಿಂದಲೂ ಅನುಸರಿಸುತ್ತಿಲ್ಲ. ದೇವರ ಅನುಗ್ರಹ ಇರಬೇಕಷ್ಟೇ. ಮೂಢನಂಬಿಕೆಗಳು ನಾವು ಸೃಷ್ಟಿ ಮಾಡಿಕೊಂಡಿರುವುದು. ದೇವರ ಮೇಲೆ ವಿಶ್ವಾಸ ಇರಬೇಕು ಎಂದರು.
ಕಾವೇರಿ ಮಾತೆಯಿಂದ ಸಮಸ್ಯೆಗೆ ಪರಿಹಾರ:
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗಿವೆ. ಹಲವು ವರ್ಷಗಳ ನಂತರ ಕಾವೇರಿ ಮಾತೆಯ ಅನುಗ್ರಹದಿಂದ ಕಾವೇರಿಕೊಳ್ಳದ ನಾಲ್ಕೂ ಜಲಾಶಯಗಳು ಭರ್ತಿಯಾಗಿವೆ. ತಮಿಳುನಾಡು ಮತ್ತು ಕರ್ನಾಟಕ ನಡುವಿನ ಸಮಸ್ಯೆಗಳಿಗೆ ಕಾವೇರಿ ತಾಯಿಯೇ ಪರಿಹಾರ ನೀಡಿದ್ದಾಳೆ. ಕಾವೇರಿ ಮಾತೆ ನೀಡುವ ತೀರ್ಪು ಎಲ್ಲರಿಗೂ ಸಮಾಧಾನ ತರುವಂತಾಗುತ್ತದೆ. ಹೀಗಾಗಿ ನಾಡಿನ ಜನರ ಪರವಾಗಿ ಪೂಜೆ ಸಲ್ಲಿಸಲಾಗಿದೆ. ನಾಡಿನ ರೈತರು, ಜನರು ಶಾಂತಿ, ಸುಖ, ಸಮೃದ್ಧಿಯಿಂದ ಇರಬೇಕೆಂದು ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದರು.
ರೈತರು ಚೆನ್ನಾಗಿದ್ದರೆ ನಾಡು ಚೆನ್ನಾಗಿರುತ್ತದೆ. ಈ ಬಾರಿ ಪ್ರಕೃತಿಯ ಸಹಕಾರ, ದೇವರ ಅನುಗ್ರಹ ದೊರೆತಿದೆ. ಇದೇ ರೀತಿ ಇನ್ನು ಮುಂದೆಯೂ ಉತ್ತಮ ಮಳೆಯಾಗಿ ಬೆಳೆಯೂ ಚೆನ್ನಾಗಿರಬೇಕೆಂದು ದೇವರಲ್ಲಿ ಪ್ರಾರ್ಥಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ತುಂಗಭದ್ರಾ, ನಾರಾಯಣಪುರ, ಆಲಮಟ್ಟಿ ಜಲಾಶಯಗಳು ಭರ್ತಿಯಾಗಿದ್ದು, ಸದ್ಯದಲ್ಲೇ ಸರ್ಕಾರದ ಪರವಾಗಿ ಬಾಗಿನ ಅರ್ಪಿಸಲಾಗುವುದು ಎಂದು ಹೇಳಿದರು.
ವಿಶೇಷ ಪೂಜೆ:
ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಂಪತಿ ಸಹಿತವಾಗಿ ಕಾವೇರಿ ಮಾತೆಗೆ ಇಂದು ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದರು.
ಹಾರಂಗಿ ಜಲಾಶಯಕ್ಕೆ ನಿನ್ನೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿಗಳು, ಮಡಕೇರಿಯಲ್ಲಿ ಕೊಡಗು ಜಿಲ್ಲಾಡಳಿತದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಡಕೇರಿಯಲ್ಲೇ ವಾಸ್ತವ್ಯ ಹೂಡಿದ್ದರು.
ಇಂದು ಬೆಳಗ್ಗೆ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತಮ್ಮ ಪತ್ನಿ ಹಾಗೂ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ತಲಕಾವೇರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ರೇಷ್ಮೆ ಸಚಿವ ಸಾ.ರಾ.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.