ಅವಿಶ್ವಾಸಕ್ಕೆ ಮುನ್ನ ಸದನದಿಂದ ಹೊರನಡೆದ ಬಿಜೆಡಿ, ಶಿವಸೇನೆ ಬಹಿಷ್ಕಾರ

ಹೊಸದಿಲ್ಲಿ : ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು ಇಂದು ಸಂಸತ್ತಿನಲ್ಲಿ ಅವಿಶ್ವಾಸ ಕಲಾಪ ಆರಂಭಗೊಂಡೊಡನೆಯೇ ಬಿಜು ಜನತಾ ದಳ (ಬಿಜೆಡಿ) ಸಂಸದರು ವಾಕ್‌ ಔಟ್‌ ಮಾಡಿದರು.
ಬಿಜೆಪಿಯ ಜಗಳಗಂಟ ಮಿತ್ರ ಪಕ್ಷ ಶಿವ ಸೇನೆ ವಿಶ್ವಾಸ ಮತ ಕಲಾಪವನ್ನು ಬಹಿಷ್ಕರಿಸಿತು.
ಅವಿಶ್ವಾಸ ಗೊತ್ತುವಳಿ ಮೇಲಿನ ಮತದಾನವು ಸಂಜೆ 6 ಗಂಟೆಯ ಸುಮಾರಿಗೆ ನಡೆಯಲಿದೆ ಎಂದು ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಹೇಳಿದ್ದಾರೆ.
ಸ್ಪೀಕರ್‌ ಸಹಿತ 545 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ 311 ಸದಸ್ಯರ ಬೆಂಬಲವಿದೆ. ಈ ಪೈಕಿ 273 ಸದಸ್ಯರು ಬಿಜೆಪಿಯವರೇ ಆಗಿದ್ದಾರೆ. ಉಳಿದಂತೆ ಎಸ್‌ಎಡಿ 4, ಶಿವಸೇನೆ 18, ಎಲ್‌ಜೆಪಿ 6, ಆರ್‌ಎಲ್‌ಎಸ್‌ಪಿ 3, ಜೆಡಿಯು 2, ಅಪ್ನಾ ದಲ್‌ 2, ಆಲ್‌ ಇಂಡಿಯಾ ಎನ್‌ ಆರ್‌ ಕಾಂಗ್ರೆಸ್‌ 1, ಎಸ್‌ಡಿಎಫ್ 1 ಮತ್ತು ಎನ್‌ಡಿಪಿಪಿ 1 ಸ್ಥಾನ ಹೊಂದಿವೆ.
ವಾಕ್‌ ಔಟ್‌ ನಡೆಸುವುದಕ್ಕೆ ಮುನ್ನ ಬಿಜೆಡಿಯ ಸಂಸದ B. ಮೆಹತಾಬ್‌ ಅವರು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಒಡಿಶಾ ರಾಜ್ಯದ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿವೆ ಎಂದು ಆರೋಪಿಸಿದರು.
ದೇಶದ ಸಮಸ್ಯೆಗಳು ಮತ್ತು ಕಳವಳಗಳನ್ನು ಸದನದಲ್ಲಿ ಮಂಡಿಸಲು ತನಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಕಾಂಗ್ರೆಸ್‌ ಹೇಳಿದೆ.
ಟಿಡಿಪಿ ಸಂಸದ ಜಯದೇವ್‌ ಭಲ್ಲಾ ಅವರು ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ