ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿಗಳಿಗೆ ಪಿಸ್ತೂಲು ಸರಬರಾಜು ಮಾಡಿದ ವ್ಯಕ್ತಿ ಬಂಧನ

ಬೆಂಗಳೂರು,ಜು.20- ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಗೈದ ಆರೋಪಿಗಳಿಗೆ ಪಿಸ್ತೂಲು ಸರಬರಾಜು ಮಾಡಿದ ಆರೋಪದ ಮೇಲೆ ವಿಶೇಷ ತನಿಖಾ ತಂಡ(ಎಸ್‍ಐಟಿ) ಮತ್ತೋರ್ವ ಆರೋಪಿಯನ್ನು ಬಂಧಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಸಂಪಾಜೆ ನಿವಾಸಿ ಮೋಹನ್ ನಾಯಕ್ ಎಂಬಾತನನ್ನು ಎಸ್‍ಐಟಿ ತಂಡ ಬುಧವಾರ ತಡರಾತ್ರಿ ಬಂಧಿಸಿ ವಶಕ್ಕೆ ಪಡೆದಿದೆ.
ನಿನ್ನೆ ದಿನಪೂರ್ತಿ ಈತನನ್ನು ವಿಚಾರಣೆಗೊಳಪಡಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೋಹನ್‍ನಾಯಕ್‍ನನ್ನು ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸಂಪಾಜೆ ನಿವಾಸಿಯಾದ ಮೋಹನ್ ನಾಯಕ್ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಪರಶುರಾಮ್ ವಾಗ್ಮೋರೆಗೆ ಪಿಸ್ತೂಲು ರವಾನಿಸಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿತ್ತು.
ಈ ಹಿನ್ನೆಲೆಯಲ್ಲಿ ಪರುಶರಾಮ್ ವಾಗ್ಮೋರೆ ನೀಡಿದ ಮಾಹಿತಿ ಮೇರೆಗೆ ಸುಳ್ಯ ತಾಲ್ಲೂಕಿನ ಸಂಪಾಜೆಗೆ ತೆರಳಿ ಮೋಹನ್ ನಾಯಕ್‍ನನ್ನು ವಶಕ್ಕೆ ಪಡೆಯಿತು. ಈತನು ಕಡಿಮೆ ಬೆಲೆಗೆ ವಿದೇಶಿ ಪಿಸ್ತೂಲುಗಳನ್ನು ಮಾರಾಟ ಮಾಡಿದ್ದ ಎನ್ನಲಾಗಿದೆ.
ವಿದೇಶಿ ಪಿಸ್ತೂಲು ಎಲ್ಲಿಂದ ಬಂದಿತು, ಯಾರು ಪೂರೈಕೆ ಮಾಡಿದರು, ಇದರ ಹಿಂದಿರುವ ಅಸಲಿಕತೆ ಸೇರಿದಂತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ತಂಡ ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತಿದೆ.

2017, ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಭೀಕರವಾಗಿ ಹಣೆಗೆ ಗುಂಡಿಟ್ಟು ಹತ್ಯೆಗೈಯಲ್ಲಾಗಿತ್ತು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‍ಐಟಿಗೆ ವಹಿಸಿದ ಮೇಲೆ ಮೊದಲು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಟಿ.ನವೀನ್‍ಕುಮಾರ್ ಅಲಿಯಾಸ್ ಹೊಟ್ಟೆ ಎಂಬಾತನನ್ನು ಬಂಧಿಸಲಾಯಿತು.

ಆತ ನೀಡಿದ ಸುಳಿವಿನ ಮೇರೆಗೆ ಪರಶುರಾಮ್ ವಾಗ್ಮೋರೆ ಸೇರಿದಂತೆ ಈವರೆಗೂ ಪೆÇಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ಮನೆ ಬಾಡಿಗೆ ಕೊಡಿಸಿದ್ದ: ಮೋಹನ್ ನಾಯಕ್ ಗೌರಿ ಲಂಕೇಶ್ ಹತ್ಯೆಗೈಯಲು ಮುಂದಾಗಿದ್ದ ಪರಶುರಾಮ್ ವಾಗ್ಮೋರೆಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸುಂಕದಕಟ್ಟೆಯಲ್ಲಿ ಬಾಡಿಗೆಗೆ ಒಂದು ಮನೆಯನ್ನೂ ಕೊಡಿಸಿದ್ದ. ಬಳಿಕ ಇಬ್ಬರ ಸ್ನೇಹವು ಆತ್ಮೀಯವಾಗಿ ಬೆಳೆದ ನಂತರವೇ ನನಗೆ ಒಂದು ಪಿಸ್ತೂಲು ಬೇಕು ಎಂಬ ಬೇಡಿಕೆಯನ್ನು ವಾಗ್ಮೋರೆ ಮೋಹನ್ ನಾಯಕ್ ಮುಂದೆ ಇಟ್ಟಿದ್ದ.

ಹಣದಾಸೆಗಾಗಿ ಮೋಹನ್ ನಾಯಕ್ ಸಂಪಾಜೆಯಿಂದ ಪಿಸ್ತೂಲು ತಂದು ವಾಗ್ಮೋರೆಗೆ ಕೊಟ್ಟಿದ್ದ. ಈತ ಕೊಟ್ಟ ಪಿಸ್ತೂಲಿನಿಂಲದೇ ವಾಗ್ಮೋರೆ ಗೌರಿ ಹಣೆಗೆ ಗುಂಡಿಟ್ಟು ಹತ್ಯೆಗೈಯ್ದಿರುವ ಸಾಧ್ಯತೆ ಎಂದು ಎಸ್‍ಐಟಿ ಮೂಲಗಳು ಖಚಿತಪಡಿಸಿವೆ.

ಸಿಬಿಐ ವಶಕ್ಕೆ ಆರೋಪಿಗಳು:
ಈ ಹಿಂದೆ ಮಹಾರಾಷ್ಟ್ರದಲ್ಲಿ ಹತ್ಯೆಗೈಯಲ್ಲಾಗಿದ್ದ ಚಿಂತಕರಾದ ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ್ ಪನ್ಸಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸತ್ತಿರುವ ಸಿಬಿಐ, ಎಸ್‍ಐಟಿ ವಶಕ್ಕೆ ಪಡೆದಿರುವ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದೆ.

ಗೌರಿ ಲಂಕೇಶ್, ಸಾಹಿತಿ ಎಂ.ಎಂ.ಕಲ್ಬುರ್ಗಿ, ಗೋವಿಂದ್ ಪನ್ಸಾರೆ ಮತ್ತು ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣವು ಒಂದೇ ಸಾಮ್ಯತೆಯಿಂದ ಕೂಡಿರುವುದರಿಂದ ಸಿಬಿಐ ಈ ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ಸರ್ಕಾರವು ಗೋವಿಂದ್ ಪನ್ಸಾರೆ ಮತ್ತು ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡಿದೆ. ಪ್ರಕರಣದ ಎಲ್ಲಾ ಆರೋಪಿಗಳನ್ನು ಸಿಬಿಐ ವಶಕ್ಕೆ ನೀಡಲು ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ