ಉಡುಪಿ: ಇಲ್ಲಿನ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶಿರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಬುಧವಾರ ಬೆಳಗ್ಗೆ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ದಾಖಲಾಗಿದ್ದ ಶ್ರೀಗಳ ಆರೋಗ್ಯ ಬಿಗಡಾಯಿಸಿತ್ತು. ಹೀಗಾಗಿ ಶ್ರೀಗಳನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಅಲ್ಲದೇ ಡ್ರಿಪ್ಸ್ ಕೂಡ ಹಾಕಲಾಗಿತ್ತು.
ಕಳೆದ ಕೆಲ ತಿಂಗಳುಗಳಿಂದ ಶ್ರೀಗಳಿಗೆ ಆಗಾಗ ಆರೋಗ್ಯ ಸಮಸ್ಯೆ ಎದುರಾಗುತ್ತಲೇ ಇತ್ತು. ಈ ಹಿಂದೆ ಥೈರಾಯ್ಡ್ ಸಮಸ್ಯೆ ಇದ್ದಿದ್ದರಿಂದ ಶಿರೂರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ನಂತರದ ದಿನಗಳಲ್ಲಿ ಪದೇ ಪದೇ ಆಸ್ಪತ್ರೆಗಳಿಗೆ ಚೆಕಪ್ ಗೆ ತೆರಳುತ್ತಿದ್ದ ಶ್ರೀಗಳು ಒಮ್ಮೆ ಗುಣಮುಖರಾದ್ರೆ ಮತ್ತೊಮ್ಮೆ ಅನಾರೋಗ್ಯಕ್ಕೆ ಈಡಾಗುತ್ತಲೇ ಇದ್ದರು.
ಚುನಾವಣೆ ಸಂದರ್ಭ ನಿರ್ಜಲೀಕರದಿಂದ ಅಸ್ವಸ್ಥರಾಗಿದ್ದರು. ನಿನ್ನೆ ಬೆಳಗ್ಗೆ ಶ್ರೀಗಳನ್ನು ಕೆಎಂಸಿಗೆ ದಾಖಲಿಸಲಾಗಿತ್ತು. ಅವರು ರಕ್ತವಾಂತಿ ಮಾಡಿದ್ದರಿಂದ ಸಂಜೆಯಿಂದಲೇ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಆಸ್ಪತ್ರೆಯಲ್ಲೇ ವಿಧಿವಶರಾಗಿದ್ದಾರೆ.
ಉಡುಪಿ ಮಠದ ಸಂಪ್ರದಾಯದಂತೆ ಶ್ರೀಗಳ ಶರೀರವನ್ನು ಮಠಕ್ಕೆ ಕೊಂಡೊಯ್ದು ಮಧ್ವ ಸರೋವರದಲ್ಲಿ ಸ್ನಾನ ಮಾಡಿಸಿ ಆರತಿ ಬೆಳಗಿ ದೇವರ ದರ್ಶನ ಮಾಡಿಸಲಾಗುತ್ತದೆ. ಬಳಿಕ ಅವರ ಪೂಜಾ ಸಾಮಾಗ್ರಿಗಳನ್ನು ಅವರ ಶರೀರದ ಜೊತೆ ಇರಿಸಿ ಬೃಂದಾವನ ನಿರ್ಮಿಸಿ ಅದರಲ್ಲಿ ಉಪ್ಪು ಹತ್ತಿ ಕಾಳುಮೆಣಸು ಕರ್ಪೂರಗಳನ್ನು ತುಂಬಿಸಿ ಸಮಾಧಿ ಮಾಡಲಾಗುತ್ತದೆ. ಶಿಷ್ಯ ಸ್ವೀಕಾರ ಸಂದರ್ಭದಲ್ಲಿ ಏನೆಲ್ಲಾ ವಿಧಿ ವಿಧಾನಗಳು ನಡೆಯುತ್ತವೆಯೋ ಅದೇ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಅಷ್ಠ ಮಠಗಳ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ಶಿಷ್ಯ ಸ್ವೀಕಾರ ವಿಚಾರ ಎಲ್ಲವೂ ದ್ವಂದ್ವ ಮಠಕ್ಕೆ ಸೇರುತ್ತದೆ. ಶಿರೂರು ಮಠಕ್ಕೆ ದ್ವಂದ್ವ ಮಠ ಸೋದೆ ಮಠ ಈ ಹಿನ್ನೆಲೆಯಲ್ಲಿ ಎಲ್ಲಾ ಕ್ರಿಯಾ ವಿಧಿವಿಧಾನಗಳನ್ನು ಸೋದೆ ಮಠ ನಡೆಸಲಿದೆ