ಉಡುಪಿ: ಶಿರೂರು ಸ್ವಾಮೀಜಿಗೆ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ ಹಿನ್ನೆಲೆ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀಗಳ ಆರೋಗ್ಯ ಸ್ಥಿತಿ ಮತ್ತು ನೀಡಿದ ಚಿಕಿತ್ಸೆ ಕುರಿತಂತೆ ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಅವಿನಾಶ ಶೆಟ್ಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಮಣಿಪಾಲ್ ಆಸ್ಪತ್ರೆಗೆ ತರುವ ಮೊದಲ ಶ್ರೀಗಳು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ನಮ್ಮಲ್ಲಿಗೆ ಕರೆತರಲಾಗಿತ್ತು. ನಮ್ಮ ಆಸ್ಪತ್ರೆಗೆ ಬಂದಾಗ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಉಸಿರಾಟಕ್ಕೆ ತೊಂದರೆಯಾಗಿತ್ತು. ದೇಹದ ಒಳಗೆ ರಕ್ತಸ್ರಾವ ಆಗಿತ್ತು. ಎಲ್ಲ ಪರಿಶೀಲನೆ ಬಳಿಕ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಕೃತಕ ಉಸಿರಾಟ ವ್ಯವಸ್ಥೆ ಮಾಡಿ ರಕ್ತ ನೀಡಲಾಗಿತ್ತು. ಎಲ್ಲ ಪ್ರಯತ್ನದ ನಂತರವೂ ಅವರ ದೇಹಸ್ಥಿತಿಯಲ್ಲಿ ಸುಧಾರಣೆ ಆಗದೇ ಎಲ್ಲ ಅಂಗಗಳು ವೈಫಲ್ಯಗೊಂಡು ಶಿರೂರು ಶ್ರೀ ಬೆಳಿಗ್ಗೆ 8.30ಕ್ಕೆ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯ ವೈದ್ಯಕೀಯ ಪರಿಶೀಲನೆಯಂತೆ ವಿಷಪ್ರಾಶನದ ಶಂಕೆಯಿದೆ. ಫುಡ್ ಪಾಯಿಸನ್ ನಿಂದಲೂ ಆಗಿರಬಹುದು. ಈ ಎಲ್ಲ ಮಾಹಿತಿಯನ್ನು ಪೋಲಿಸರಿಗೆ ಮಾಹಿತಿ ನೀಡಿದ್ದೇವೆ ಎಂದು ಅವಿನಾಶ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.