ಮೈಸೂರು,ಜು.19- ಹತ್ತು ವರ್ಷಗಳ ನಂತರ ಎಚ್.ಡಿ.ಕೋಟೆ ತಾಲ್ಲೂಕಿನ ನುಗು ಜಲಾಶಯ ಭರ್ತಿಯಾಗಿದ್ದು, ಈ ಭಾಗದ ಜನ ಸಂತಸ ವ್ಯಕ್ತಪಡಿಸಿದ್ದಾರೆ. ನುಗು ಜಲಾಶಯದ ಗರಿಷ್ಠ ಮಟ್ಟ 110 ಅಡಿಗಳು. ಈಗ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಒಂದು ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ನುಗು ಜಲಾಶಯ ನಂಜನಗೂಡು ಭಾಗದ ರೈತರಿಗೆ ಉಪಯೋಗವಾಗಲಿದ್ದು, ರೈತರ ಅನುಕೂಲಕ್ಕಾಗಿಯೇ ಒಂದು ಸಾವಿರ ಕ್ಯೂಸೆಕ್ ನೀರ್ನು ಹರಿಯಬಿಡಲಾಗುತ್ತಿದೆ.
ಜಲಾಶಯಕ್ಕೆ ಎರಡು ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಒಳಹರಿವು ಹೆಚ್ಚಾಗಿರುವುದರಿಂದ ಇನ್ನು ಹೆಚ್ಚು ನೀರನ್ನು ಹೊರಬಿಡುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ನುಗು ಜಲಾಶಯದ ಕಾರ್ಯ ನಿರ್ವಾಹಕ ಇಂಜಿನಿಯರ್ ರಾಜೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ.
ನುಗು ಜಲಾಶಯದ ನೀರನ್ನು ನಂಜನಗೂಡಿನ ಕೆರೆಗಳಿಗೆ ತುಂಬಿಸುವಂತೆ ರೈತರು ಆಗ್ರಹಿಸಿದ್ದಾರೆ.