ಬೆಂಗಳೂರು:ಜು-19: 2018ರಲ್ಲಿ ನಡೆದ ಕಾಮನ್ವೆಲ್ತ್ ನ ವೈಟ್ಲಿಫ್ಟಿಂಗ್ ಪುರುಷರ 56 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಗುರುರಾಜ್ ಪೂಜಾರಿ ಅವರಿಗೆ 25 ಲಕ್ಷ ರು. ನಗದು ಬಹುಮಾನ ಘೋಷಿಸಿದ್ದ ಕರ್ನಾಟಕ ಸರಕಾರ ಎಂದೂ ಮಾತು ತಪ್ಪುವುದಿಲ್ಲ. ಚುನಾವಣೆ ಇದ್ದ ಕಾರಣಕ್ಕೆ ಗುರುರಾಜ್ ಅವರಿಗೆ ಹಣ ಸಂದಾಯ ತಡವಾಗಿದೆ. ಕೂಡಲೇ ಇವರನ್ನು ಭೇಟಿ ಮಾಡಿ ಘೋಷಣೆ ಮಾಡಿದ್ದ ಪ್ರಶಸ್ತಿಯ ಮೊತ್ತವನ್ನು ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ ಅವರು ಭರವಸೆ ನೀಡಿದ್ದಾರೆ.
ಗುರುರಾಜ್ ಪೂಜಾರಿ ಅವರಿಗೆ ಸರಕಾರ ಘೋಷಿಸಿದ್ದ ನಗದು ಬಹುಮಾನ ವಿತರಣೆ ಮಾಡದೇ ಇರುವ ಬಗ್ಗೆ ಮಾಧ್ಯಮದಲ್ಲಿ ಬಿತ್ತರಗೊಂಡಿರುವ ವರದಿಗೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಸರಕಾರ ಸದಾ ಕ್ರೀಡೆಗೆ ಉತ್ತೇಜನ ನೀಡಲಿದೆ. ಯುವಕರು ಕ್ರೀಡೆಗೆ ಹೆಚ್ಚು ಆದ್ಯತೆ ನೀಡುವಂತೆ ಪ್ರೋತ್ಸಾಹಿಸುತ್ತದೆ. ಇತ್ತೀಚೆಗೆ ನಡೆದ ಕಾಮನ್ವೆಲ್ತ್ ನಲ್ಲಿ ಗುರುರಾಜ್ ಪೂಜಾರಿ ವೈಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದು ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಇವರ ಈ ಸಾಧನೆಯನ್ನು ಕರ್ನಾಟಕ ಸರಕಾರ ಶ್ಲಾಘಿಸಿ, ಆಗಿನ ಕ್ರೀಡಾ ಸಚಿವರು ನಗದು ಪ್ರಶಸ್ತಿ ಘೋಷಿಸಿದ್ದರು. ಆದರೆ, ಅದೇ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸಿದ್ದರಿಂದ ಈ ಪ್ರಕ್ರಿಯೆ ತಡವಾಗಿರಬಹುದು. ಆದರೆ, ಸರಕಾರ ನೀಡಿದ ಆಶ್ವಾಸನೆ ಎಂದೂ ಸುಳ್ಳಾಗದು. ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗುರುರಾಜ್ ಅವರನ್ನು ಸ್ವತಃ ಭೇಟಿ ಮಾಡಲಿದ್ದೇನೆ. ಕೂಡಲೇ ಪ್ರಶಸ್ತಿ ಮೊತ್ತ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.
ಅಥ್ಲೆಟಿಕ್ನಲ್ಲಿ ಭಾರತಕ್ಕೆ ಚಿನ್ನದ ಪದ ಗೆದ್ದು ತಂದ ಹಿಮಾದಾಸ್ ನಂತೆ ಸಾಕಷ್ಟು ಯುವಕರು ಕ್ರೀಡಾ ಕ್ಷೇತ್ರಕ್ಕೆ ಬರಬೇಕು. ನಾನೂ ಕೂಡ ಯುವಕನಾಗಿದ್ದ ಸಂದರ್ಭದಲ್ಲಿ ಕ್ರೀಡಾ ಪಟುವಾಗಿದ್ದೆ. ಕ್ರೀಡೆಯನ್ನು ಗೌರವಿಸು ಹಾಗೂ ಪ್ರೋತ್ಸಾಹಿಸುವ ಆಸಕ್ತಿ ನನ್ನಲ್ಲಿದೆ. ಕ್ರೀಡಾ ಸಚಿವನಾಗಿ ಯಾವ ಕ್ರೀಡಾಪಟುಗೂ ನಗದು ಬಹುಮಾನ ತಡವಾಗಬಾರದು. ಗುರುರಾಜ್ಗೆ ಸರಕಾರ ನೀಡಿದ ಆಶ್ವಾಸನೆಯನ್ನು ಕಾಪಾಡಿಕೊಳ್ಳಲಿದೆ ಎಂದು ಹೇಳಿದ್ದಾರೆ.
Dr.G.parameshwar,gururaj poojari