ಬೆಂಗಳೂರು, ಜು.19- ಭೂ ಗರ್ಭದಲ್ಲಿ ಕಸದ ತೊಟ್ಟಿ ಅಳವಡಿಸುವ ಕಾಮಗಾರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ 40 ಕೋಟಿ ರೂ.ಗಳ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿರುವ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್, ಈ ಸಂಬಂಧ ಎಸಿಬಿ, ಬಿಎಂಟಿಎಫ್ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವ್ಯವಹಾರದ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕೆ.ಜೆ.ಜಾರ್ಜ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಹಾಗೂ ಸಿದ್ದರಾಮಯ್ಯ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಘನತ್ಯಾಜ್ಯ ನಿರ್ವಹಣೆ ಇಲಾಖೆಯ ಕಾರ್ಯಪಾಲಕ ಅಭಿಯಂತರರ ವಿರುದ್ಧವೂ ದೂರು ದಾಖಲಿಸಿದ್ದೇನೆ. ಇವರೆಲ್ಲರ ವಿರುದ್ಧ ವಂಚನೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಮತ್ತು ಸಾರ್ವಜನಿಕ ಹಣ ದೋಚಲು ಸಂಚು ರೂಪಿಸಿರುವ ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.
ನಗರದ ಆಯ್ದ 200 ವಾಣಿಜ್ಯ ಸ್ಥಳಗಳಲ್ಲಿ ಭೂ ಗರ್ಭದಲ್ಲಿ ಕಸದ ತೊಟ್ಟಿ ಅಳವಡಿಸಲು ಜೊಂಟಾ ಇನ್ಫಾಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಟೆಂಡರ್ ನೀಡಲಾಗಿತ್ತು. ಈ ಸಂಸ್ಥೆ ಕೆ.ಜೆ.ಜಾರ್ಜ್ ಮುಖ್ಯ ಪಾಲುದಾರಿಕೆಯ ಎಂಬಸ್ಸಿ ಗ್ರೂಪ್‍ನ ಅಂಗಸಂಸ್ಥೆಯಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ನೆದರ್‍ಲ್ಯಾಂಡ್‍ನ ನೆಕ್ಸಸ್ ನೊವುಸ್ ಎಂಬ ಅರ್ಹ ಸಂಸ್ಥೆಯನ್ನು ಬೆದರಿಸಿ ಹಿಂದಕ್ಕೆ ಸರಿಯುವಂತೆ ಮಾಡಲಾಗಿದೆ. ಅರ್ಹತೆ ಇಲ್ಲದಿದ್ದರೂ ಜೊಂಟಾ ಸಂಸ್ಥೆಗೆ ಯೋಜನೆಯ ಕಾರ್ಯಾದೇಶ ನೀಡಲಾಗಿದೆ ಎಂದು ಅವರು ಆರೋಪಿಸಿದರು.
2.5 ಕ್ಯುಬಿಕ್ ಮೀಟರ್ ಮತ್ತು 1.5 ಕ್ಯುಬಿಕ್ ಮೀಟರ್ ಸಾಮಥ್ರ್ಯದ 200 ನೆಲದಡಿಯ ಕಸದ ಡಬ್ಬಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಹೊತ್ತೊಯ್ಯುವ ಕ್ರೇನ್‍ಗಳನ್ನು ಒಳಗೊಂಡಂತಹ 8 ಟ್ರಕ್‍ಗಳಿಗೆ 4.48 ಕೋಟಿ ರೂ. ನಿಗದಿಪಡಿಸಲಾಗಿತ್ತು. 2.5 ಕ್ಯುಬಿಕ್ ಮೀಟರ್ ಮತ್ತು 1.5 ಕ್ಯುಬಿಕ್ ಮೀಟರ್ ಸಾಮಥ್ರ್ಯದ 200 ನೆಲದಡಿ ಅಳವಡಿಸುವಂತಹ ಕಸ ಸಂಗ್ರಹದ ಡಬ್ಬಗಳ ಪೂರೈಕೆಗೆ 11.85 ಕೋಟಿ ರೂಪಾಯಿ ಎಂದು ನಿರ್ಧರಿಸಲಾಗಿತ್ತು. ಪರಿಚಾರಕರ ಸಹಿತ 200 ಸ್ಥಳಗಳ ನೆಲದಡಿಯ ಕಸದ ಡಬ್ಬಗಳ ಕಾರ್ಯ ನಿರ್ವಹಣೆಗೆ 60 ತಿಂಗಳ ಅವಧಿಗೆ 5.12 ಕೋಟಿ ರೂ. ಹಾಗೂ ನೆಲದಡಿಯ ಕಸದ ಡಬ್ಬಿಗಳಲ್ಲಿ ಸಂಗ್ರಹವಾದ ತ್ಯಾಜ್ಯಗಳನ್ನು ಖಾಲಿ ಮಾಡಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಸಾಗಣೆ ಮಾಡಲು 33.81 ಕೋಟಿ ರೂ. ನಿಗದಿಪಡಿಸಲಾಗಿತ್ತು. ಒಟ್ಟಾರೆ ಈ ನಾಲ್ಕು ಕಾರ್ಯಗಳಿಗೆ ಒಟ್ಟು 55 ಕೋಟಿಯ 27 ಲಕ್ಷದ 53 ಸಾವಿರದ 332 ರೂಪಾಯಿಗಳಿಗೆ ಕಾರ್ಯಾದೇಶ ಪತ್ರವನ್ನು ಜೊಂಟಾ ಸಂಸ್ಥೆಗೆ ನೀಡಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.
200 ನೆಲದಡಿಯ ಜೋಡಿ ಡಬ್ಬಗಳ ಹೆಸರಿನಲ್ಲಿ ಒಟ್ಟು 9ರಿಂದ 10 ಕೋಟಿ ರೂ.ದೋಚಲಾಗಿದೆ. ಕ್ರೇನ್‍ಗಳನ್ನು ಒಳಗೊಂಡಂತಹ 8 ಟ್ರಕ್‍ಗಳ ಪೂರೈಕೆಗೆ ತಲಾ ಟ್ರಕ್ ಒಂದಕ್ಕೆ 56 ಸಾವಿರ ರೂಪಾಯಿಯಂತೆ ಒಟ್ಟು 4 ಕೋಟಿಯ 48 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಆದರೆ ಟಾಟಾ ಸಂಸ್ಥೆಯ ಈ ಟ್ರಕ್‍ಗಳ ಬೆಲೆ 20 ಲಕ್ಷ ರೂಪಾಯಿಗೂ ಕಡಿಮೆ ಇದೆ. ಮಾತ್ರವಲ್ಲ ಜೊಂಟಾ ಸಂಸ್ಥೆ ಕೇವಲ 2 ಟ್ರಕ್‍ಗಳನ್ನು ಮಾತ್ರ ನೀಡಿದೆ. ಇನ್ನುಳಿದ 6 ಟ್ರಕ್‍ಗಳು ಇದುವರೆಗೂ ಹಸ್ತಾಂತರಿಸಿಲ್ಲ ಎಂದು ಎನ್.ಆರ್. ರಮೇಶ್ ಆರೋಪಿಸಿದರು.
ಪರಿಚಾರಕರ ಸಹಿತ 200 ಸ್ಥಳಗಳಲ್ಲಿ ಕಸದ ಡಬ್ಬಗಳ ನಿರ್ವಹಣೆಗೆ 5 ಕೋಟಿಯ 12 ಲಕ್ಷದ 88 ಸಾವಿರದ 132 ರೂಪಾಯಿ ಬಿಡುಗಡೆ ಮಾಡಲಾಗಿದೆ. ಆದರೆ 200 ಸ್ಥಳಗಳಲ್ಲಿ ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿರುವ ಯಾವುದೇ ಸ್ಥಳದಲ್ಲಿಯೂ ಯಾವೊಬ್ಬ ಪರಿಚಾರಕನೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಈ ಕಸದ ಡಬ್ಬಗಳಲ್ಲಿ 5,40,200 ಮೆಟ್ರಿಕ್ ಟನ್‍ಗಳಷ್ಟು ತ್ಯಾಜ್ಯ ಸಂಗ್ರಹವಾಗುವುದು ಎಂದು ನಿರೀಕ್ಷಿಸಿ ಅವುಗಳ ಸಾಗಣೆಗೆ ಪ್ರತಿ ಟನ್‍ಗೆ 626 ರೂ.ನಂತೆ ಒಟ್ಟು 33 ಕೋಟಿಯ 81 ಲಕ್ಷದ 65ಸಾವಿರದ 200 ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಕಾರ್ಯದಲ್ಲಿ ಕನಿಷ್ಠ 20ರಿಂದ 25 ಕೋಟಿ ರೂ.ಗೂ ಹೆಚ್ಚು ಹಣ ಲೂಟಿ ಮಾಡಲಾಗಿದೆ ಎಂದು ದೂರಿದರು.
40 ಕೋಟಿ ರೂ.ಗೂ ಅಧಿಕ ಹಣ ಲೂಟಿ ಮಾಡಿರುವ ಈ ಹಗರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕು. ಜೊಂಟಾ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈ ಹಗರಣಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಅಮಾನತುಮಾಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಮೇಶ್ ಒತ್ತಾಯಿಸಿದರು.